ಚೌಳಹಿರಿಯೂರು: ಧರ್ಮ ಮತ್ತು ಅಧ್ಯಾತ್ಮ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಧರ್ಮ ಸರಿದಾರಿಯಲ್ಲಿ ಕೊಂಡೊಯ್ದರೆ, ಅಧ್ಯಾತ್ಮ ನೆಮ್ಮದಿ, ಸಮಾಧಾನ ತಂದುಕೊಡುತ್ತದೆ ಎಂದು ಅಧ್ಯಾತ್ಮ ಚಿಂತಕ ಯಗಟಿ ಶಿವಲಿಂಗಸ್ವಾಮಿ ತಿಳಿಸಿದರು.
ಯಗಟಿ ಹೋಬಳಿ ಶರಣ ಸಾಹಿತ್ಯ ಪರಿಷತ್‌ನಿಂದ ಚಿಕ್ಕನಾಯಕನಹಳ್ಳಿಯಲ್ಲಿ ಆಯೋಜಿಸಿದ್ದ ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ಮಾತನಾಡಿ, ಧರ್ಮದ ತಳಹದಿಯಲ್ಲಿ ಬದುಕಿನ ಸಾರ್ಥಕ್ಯ ಕಾಣಲು ಸಾಧ್ಯವಾಗುತ್ತದೆ. 12ನೇ ಶತಮಾನದಲ್ಲಿ ಬಸವಣ್ಣನವರು ದಯವಿಲ್ಲದ ಧರ್ಮ ಯಾವುದಯ್ಯ ಎಂದು ಹೇಳುವ ಮೂಲಕ ಕರುಣೆ, ಪ್ರೀತಿ, ವಿಶ್ವಾಸ, ನಂಬಿಕೆ, ಅನುಕಂಪ ಮತ್ತು ಮಾನವೀಯ ಮೌಲ್ಯಗಳು ಧರ್ಮದಲ್ಲಿ ಅಡಕವಾಗಿರಬೇಕು ಎಂಬುದಾಗಿ ತಿಳಿಸಿದ್ದರು.
ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ವಿರುಪಾಕ್ಷಪ್ಪ ಮಾತನಾಡಿ, ಬಸವಾದಿ ಶರಣರ ವಿಚಾರಧಾರೆಗಳು ಎಲ್ಲ ಕಾಲಕ್ಕೂ ಪ್ರಸ್ತುತ ಎಂದರು.
ಯಳ್ಳಂಬಳಸೆ ಗ್ರಾಪಂ ಅಧ್ಯಕ್ಷ ಸೈಯದ್ ಸಲೀಂ ಮಾತನಾಡಿ, ಬಸವ ತತ್ವದಲ್ಲಿ ಎಲ್ಲ ಧರ್ಮದಲ್ಲೂ ಅಡಕಗೊಳಿಸಿಕೊಳ್ಳುವ ಅಂಶಗಳಿವೆ ಎಂದು ತಿಳಿಸಿದರು.
ದೇವಾಲಯ ಸಮಿತಿ ಅಧ್ಯಕ್ಷ ಸಿ.ಕೆ.ಮೂರ್ತಿ, ಕೆ.ಮರುಳಸಿದ್ದಪ್ಪ, ನವೀನ, ಸದಾಶಿವ, ನಾಗರಾಜ್ ಮಾತನಾಡಿದರು. ಬಿ.ಎನ್.ದೇವೇಂದ್ರಪ್ಪ, ಎ.ಎಮ್.ಕುಮಾರಪ್ಪ ಇದ್ದರು.