ಜಿಲ್ಲೆ

ರೋಗಪೀಡಿತ ಮಕ್ಕಳ ಕುಟುಂಬಕ್ಕೆ ಪರಿಹಾರ

ಹನೂರು: ಮಕ್ಕಳಿಗೆ ತಗುಲುವ ವಿಚಿತ್ರ ಚರ್ಮರೋಗವನ್ನು ತಡೆಗಟ್ಟುವ ಸಂಬಂಧ ಸರ್ಕಾರ ಈಗಾಗಲೇ ಅಗತ್ಯ ಕ್ರಮವಹಿಸಿದ್ದು, ರೋಗಪೀಡಿತ ಮಕ್ಕಳ ಕುಟುಂಬಕ್ಕೆ ಪರಿಹಾರ ದೊರಕಿಸಿ ಕೊಡುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದರು.
ತಾಲೂಕಿನ ಭದ್ರಯ್ಯನಹಳ್ಳಿ ಹಾಗೂ ಕುರಟ್ಟಿ ಹೊಸೂರು ಗ್ರಾಮದಲ್ಲಿ ಮಕ್ಕಳಿಗೆ ವಿಚಿತ್ರ ಚರ್ಮರೋಗ ಮರುಕಳುಹಿಸಿರುವ ಹಿನ್ನೆಲೆಯಲ್ಲಿ ಶುಕ್ರವಾರ ರೋಗಪೀಡಿತ ಮಕ್ಕಳ ಮನೆಗೆ ಭೇಟಿ ನೀಡಿ ಪಾಲಕರು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.
ಜೆರೊಡರ್ಮ ಫಿಗ್ಮಾಂಟೋಸಂ ಎಂಬ ವಿಚಿತ್ರ ಚರ್ಮರೋಗ ಅಪರೂಪದ್ದಾಗಿದ್ದು, ಇತರ ದೇಶದಲ್ಲೂ ಮಕ್ಕಳು ಈ ರೋಗಕ್ಕೆ ಒಳಗಾಗಿದ್ದಾರೆ. ಆದರೆ ೀವರೆಗೂ ಚಿಕಿತ್ಸೆ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಈ ಸಂಬಂಧ ಈಗ ಸಂಶೋಧನೆಗಳು ನಡೆಯುತ್ತಿದೆ. ಅಲ್ಲದೆ ಈಗಾಗಲೇ ಇಲಾಖೆ ಅಧಿಕಾರಿಗಳು ರೋಗಪೀಡಿತ ಮಕ್ಕಳ ಬಗ್ಗೆ ಅಧ್ಯಯನ ನಡೆಸಿದ್ದು, ರೋಗವನ್ನು ತಡೆಗಟ್ಟಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರೋಗಬಾಧೆಗೆ ಒಳಗಾಗಿರುವ ಮಕ್ಕಳಿಗೆ 1400 ರೂ. ಪಿಂಚಣಿ ವ್ಯವಸ್ಥೆ ಮಾಡಲಾಗಿದೆ. ಅಗತ್ಯ ಬಟ್ಟೆ, ತಪಾಸಣೆ, ಚಿಕಿತ್ಸೆ, ಪೌಷ್ಟಿಕ ಆಹಾರ ಹಾಗೂ ಅಗತ್ಯ ಔಷಧ ನೀಡಲಾಗುವುದು. ಜತೆಗೆ ಮುಂದಿನ ದಿನಗಳಲ್ಲಿ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿಕೊಡಲು ಅಗತ್ಯ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ರಕ್ತಸಂಬಂಧ ಮದುವೆ ನಿಲ್ಲಿಸಿ
ಈ ರೋಗವು ಹೆಚ್ಚಾಗಿ ಅನುವಂಶೀಯತೆಯಿಂದ ಕಂಡು ಬಂದಿದೆ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಹಾಗಾಗಿ ಮಗು ಗರ್ಭಾವಸ್ಥೆಯಲ್ಲಿ ಇರುವಾಗಲೇ ಈ ಬಗ್ಗೆ ತಿಳಿಯಬಹುದಾಗಿದೆ. ಆದ್ದರಿಂದ ರಕ್ತ ಸಂಬಂಧದ ಮದುವೆಯನ್ನು ಮೊದಲು ನಿಲ್ಲಿಸಬೇಕು. ಇದರಿಂದ ಚರ್ಮರೋಗ ತಡೆಗಟ್ಟಲು ಸಾಧ್ಯ ಎಂದು ಸಚಿವರು ತಿಳಿಸಿದರು.
ಈ ವೇಳೆ ಕುರಟ್ಟಿ ಹೊಸೂರಿನಲ್ಲಿ ರೋಗಪೀಡಿತ ಬಾಲಕಿಯ ತಂದೆ ಬಸವಣ್ಣ ಮಾತನಾಡಿ, ಕೂಲಿ ಮಾಡಿ ಜೀವನ ನಡೆಸುತ್ತಿರುವ ನಾವು ಮಗುವಿನ ಚಿಕಿತ್ಸೆಗೆ ಈಗಾಗಾಲೇ ಲಕ್ಷಾಂತರ ರೂ. ಖರ್ಚು ಮಾಡಿದ್ದು, ಸಂಕಷ್ಟಕ್ಕೆ ಸಿಲುಕಿದ್ದೇವೆ. ಆದ್ದರಿಂದ ಸರ್ಕಾರದಿಂದ ಪರಿಹಾರ ದೊರಕಿಸಿ ಕೊಡುವಂತೆ ಮನವಿ ಮಾಡಿದರು.
ಮಾಜಿ ಶಾಸಕ ಆರ್.ನರೇಂದ್ರ ಮಾತನಾಡಿ, ಕುರಟ್ಟಿ ಹೊಸೂರು ಹಾಗೂ ಶೆಟ್ಟಳ್ಳಿ ಗ್ರಾಪಂ ಭಾಗದಲ್ಲಿನ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿಲ್ಲ. ಇದರಿಂದ ಚಿಕಿತ್ಸೆ ಪಡೆಯಬೇಕಾದರೆ ಕೌದಳ್ಳಿಗೆ ತೆರಳಬೇಕಿದೆ. ಆದ್ದರಿಂದ ಕುರಟ್ಟಿ ಹೊಸೂರಿನಲ್ಲಿ ಪಿಹೆಚ್‌ಸಿ ಕೇಂದ್ರ ತೆರೆಯುವಂತೆ ಮನವಿ ಮಾಡಿದರು. ಇದಕ್ಕೆ ದನಿಗೂಡಿಸಿದ ಗ್ರಾಮಸ್ಥರು ಕೌದಳ್ಳಿ ಹಾಗೂ ಹನೂರು ಸರ್ಕಾರಿ ಆಸ್ಪತ್ರೆಯಲ್ಲಿ ರಾತ್ರಿ ವೇಳೆ ವೈದ್ಯರನ್ನು ನಿಯೋಜಿಸುವಂತೆ ಮನವಿ ಮಾಡಿದರು. ಈ ಬಗ್ಗೆ ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಕಾಶ್ ಹಾಗೂ ಶಾಸಕ ಎಂ.ಆರ್ ಮಂಜುನಾಥ್ ಅವರಿಂದ ಮಾಹಿತಿ ಪಡೆದರು. ಈಗಾಗಲೇ ಅರ್ಜಿ ಸಲ್ಲಿಸಿರುವ ಸ್ಥಳೀಯ ವೈದ್ಯರನ್ನು ನೇಮಕ ಮಾಡಿಕೊಳ್ಳುವಂತೆ ಡಿಎಚ್‌ಒ ಡಾ.ಚಿದಂಬರಂಗೆ ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಗೀತಾ ಹುಡೇದಾ, ಉಪ ವಿಭಾಗಾಧಿಕಾರಿ ಮಹೇಶ್, ತಹಸೀಲ್ದಾರ್ ಗುರುಪ್ರಸಾದ್, ತಾಪಂ ಇಒ ಉಮೇಶ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಇದ್ದರು.