ಉಡುಪಿ: ಜಿಲ್ಲೆಯಲ್ಲಿ ಮಂಗಳವಾರ 72 ಕರೊನಾ ಪಾಸಿಟಿವ್ ವರದಿಯಾಗಿದೆ. ಸೋಂಕಿಗೆ ತುತ್ತಾದವರಿಗಿಂತ ಗುಣ ಹೊಂದಿ ಡಿಸ್ಚಾರ್ಜ್ ಆದವರ ಸಂಖ್ಯೆ ಹೆಚ್ಚಿರುವುದು ಸಂತಸದ ಸುದ್ದಿ. ಮಂಗಳವಾರ ಜಿಲ್ಲೆಯ ವಿವಿಧ ಕೋವಿಡ್-19 ಆಸ್ಪತ್ರೆಗಳಿಂದ 80 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
ಸೋಂಕಿತ 72 ಮಂದಿಯಲ್ಲಿ ಉಡುಪಿ 16, ಕುಂದಾಪುರ 41, ಕಾರ್ಕಳ 15 ಜನರು ಸೋಂಕಿಗೆ ತುತ್ತಾದವರು. ಇದರಲ್ಲಿ 51 ಪುರುಷರು, 19 ಮಹಿಳೆಯರು, ಇಬ್ಬರು ಮಕ್ಕಳಿದ್ದಾರೆ. ಸದ್ಯ ಪ್ರಾಥಮಿಕ ಸಂಪರ್ಕದಿಂದಾಗಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. 48 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿದೆ. 14 ಮಂದಿಗೆ ಇಲ್‌ನೆಸ್‌ಗೆ ಸಂಬಂಧಿಸಿ ಪರೀಕ್ಷಿಸಿದಾಗ ಸೋಂಕು ಕಾಣಿಸಿಕೊಂಡಿದೆ. ಒಬ್ಬರು ಉಸಿರಾಟ ಸಮಸ್ಯೆಯಿದ್ದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಇನ್ನುಳಿದ 7 ಮಂದಿ ಬೆಂಗಳೂರಿನಿಂದ, ಇಬ್ಬರು ಮಂಗಳೂರಿನಿಂದ ಉಡುಪಿಗೆ ಬಂದವರಾಗಿದ್ದಾರೆ.
712 ಮಂದಿ ವರದಿ ನೆಗೆಟಿವ್: ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1733ಕ್ಕೆ ಏರಿಕೆಯಾಗಿದೆ. ಈವರೆಗೆ 1360 ಮಂದಿ ರೋಗಮುಕ್ತರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ 370 ಸಕ್ರಿಯ ಪ್ರಕರಣಗಳಿವೆ. ಮಂಗಳವಾರದ ವರದಿಯಲ್ಲಿ 712 ಮಂದಿಯ ವರದಿ ನೆಗೆಟಿವ್ ಎಂದು ಬಂದಿದೆ. ಇನ್ನೂ 1080 ಮಂದಿಯ ವರದಿ ಬರಬೇಕಿದೆ. 115 ಮಂದಿಯ ಮಾದರಿಯನ್ನು ಸಂಗ್ರಹಿಸಲಾಗಿದೆ ಎಂದು ಡಿಸಿ ಜಿ.ಜಗದೀಶ್ ತಿಳಿಸಿದ್ದಾರೆ.
ಉಡುಪಿ ನಗರಸಭೆ ಸೀಲ್‌ಡೌನ್: ಉಡುಪಿ ನಗರಸಭೆ ಹೆಲ್ತ್ ಇನ್ಸ್‌ಪೆಕ್ಟರ್ ಒಬ್ಬರಿಗೆ ಮತ್ತು ಉಡುಪಿ ತಾಲೂಕಿನ ಗ್ರಾಮ ಸಹಾಯಕನಿಗೆ ಸೋಂಕು ದೃಢವಾಗಿದ್ದು, ನಗರಸಭೆ ಕಚೇರಿಯನ್ನು ಮಂಗಳವಾರ ಸೀಲ್ಡೌನ್ ಮಾಡಲಾಗಿದೆ. ಮುಂಡ್ಕೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಶಾಖೆಯ ಆರೋಗ್ಯ ಸಹಾಯಕಿಗೆ ಕರೊನಾ ಸೋಂಕು ದೃಢವಾಗಿದ್ದು, ಆರೋಗ್ಯ ಕೇಂದ್ರವನ್ನು ಸೀಲ್‌ಡೌನ್ ಮಾಡಲಾಗಿದ್ದು, ಸೋಂಕಿತೆಯನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಒಂದೇ ಕುಟುಂಬದ ಏಳು ಮಂದಿಗೆ ಪಾಸಿಟಿವ್: ಪಡುಬಿದ್ರಿ: ಕಾಪು ಮಲ್ಲಾರಿನ ಒಂದೇ ಕುಟುಂಬದ ಏಳು ಮಂದಿಗೆ ಮಂಗಳವಾರ ಕರೊನಾ ಸೋಂಕು ದೃಢಪಟ್ಟಿದೆ. ಮಲ್ಲಾರು ಕೊಂಬಗುಡ್ಡೆಯ ಯುವತಿಯನ್ನು ಹೊಸನಗರಕ್ಕೆ ಮದುವೆ ಮಾಡಿಕೊಡಲಾಗಿತ್ತು. ಮದುವೆ ಬಳಿಕ ಪತಿ ಮನೆಗೆ ತೆರಳಿದ ಮೇಲೆ ಜುಲೈ 6ರಂದು ವಧುವಿಗೆ ಸೋಂಕು ದೃಢಪಟ್ಟಿತ್ತು. ಮಲ್ಲಾರಿನ ಆಕೆಯ ಮನೆಯವರ ಮೇಲೆ ನಿಗಾವಿರಿಸಿ, ಕರೊನಾ ಟೆಸ್ಟ್ ನಡೆಸಲಾಗಿತ್ತು. ಈಗ ಇವರಲ್ಲಿ 7 ಮಂದಿಯ ವರದಿ ಪಾಸಿಟಿವ್ ಬಂದಿದೆ. ಮೆಹೆಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಇತರರ ಮೇಲೆ ನಿಗಾ ಇರಿಸಲಾಗಿದೆ. ಕಾಪು ಪೊಲೀಸ್ ಠಾಣೆ ಕಾನ್‌ಸ್ಟೆಬಲ್, ಮಣಿಪಾಲ ಖಾಸಗಿ ಆಸ್ಪತ್ರೆ ಸಿಬ್ಬಂದಿ ಇನ್ನಂಜೆ ನಿವಾಸಿ ಮಹಿಳೆಗೂ ಸೋಂಕು ದೃಢವಾಗಿದೆ.