ಜಿಲ್ಲೆ

ಅತಿಥಿ ಶಿಕ್ಷಕರ, ಉಪನ್ಯಾಸಕರ ವೇತನ ಬಿಡುಗಡೆ ಮಾಡಲಿ

ಶಿವಮೊಗ್ಗ: ಅತಿಥಿ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ಕೂಡಲೇ ಗೌರವಧನ ಬಿಡುಗಡೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಬಹಿರಂಗ ಪತ್ರ ಬರೆಯುವುದಾಗಿ ಕ್ರಾಂತಿವೀರ ಬ್ರಿಗೇಡ್ ಸಂಸ್ಥಾಪಕ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಆಗಸ್ಟ್‌ನಿಂದ ಇದುವರೆಗೂ ಅತಿಥಿ ಉಪನ್ಯಾಸಕರಿಗೆ ಗೌರವಧನ ಬಿಡುಗಡೆಯಾಗಿಲ್ಲ. ಪಾಠ ಮಾಡುವ ಗುರುಗಳಿಗೆ ವೇತನ ಪಾವತಿಸಲಾಗದ ದುರ್ಗತಿ ರಾಜ್ಯ ಸರ್ಕಾರಕ್ಕೆ ಬಂದಿರುವುದು ದುರ್ದೈವ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

ಅತಿಥಿ ಉಪನ್ಯಾಸಕರ, ಶಿಕ್ಷಕರ ಅವರ ಸೇವೆಗೆ ಬೆಲೆಯಿಲ್ಲವೆ? ಅವರು ನೇಣು ಹಾಕಿಕೊಳ್ಳಬೇಕೆ? ನೇಣು ಹಾಕಿಕೊಂಡರೆ ಮಾತ್ರ ಈ ಸರ್ಕಾರಕ್ಕೆ ಅತಿಥಿ ಶಿಕ್ಷಕರ ಸಮಸ್ಯೆ ಗೊತ್ತಾಗುತ್ತದೆಯೇ ಎಂದು ಪ್ರಶ್ನಿಸಿದರು.

ಮೊದಲು ಅತಿಥಿ ಶಿಕ್ಷಕರು ಹಾಗೂ ಉಪನ್ಯಾಸಕರ ಗೌರವಧನ ಬಿಡುಗಡೆ ಮಾಡಬೇಕು. ಸುಮಾರು 60 ಸಾವಿರ ಮಂದಿ ಈ ವರ್ಗಕ್ಕೆ ಸೇರಿದವರಿದ್ದಾರೆ. ಇವರೆಲ್ಲ ಜೀವನ ಮಾಡುವುದು ಹೇಗೆ? ಹಾಗಿದ್ದರೆ ಸಚಿವರು ಹಾಗೂ ಶಾಸಕರ ವೇತನವನ್ನೂ ಸರ್ಕಾರ ತಡೆಹಿಡಿಯಲಿ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ಗುತ್ತಿಗೆದಾರರ ಸಮಸ್ಯೆಯೂ ಸಾಕಷ್ಟಿದೆ. ಆಗಿರುವ ಕಾಮಗಾರಿಗಳ ಬಿಲ್ 64 ಸಾವಿರ ಕೋಟಿ ರೂ. ಬಾಕಿ ಇದೆ. ಶಿವಮೊಗ್ಗ ಜಿಲ್ಲೆಯ ಗುತ್ತಿಗೆದಾರರಿಗೆ 2,250 ಕೋಟಿ ರೂ. ಬಿಡುಗಡೆ ಆಗಬೇಕಿದೆ. ಹೀಗಾದರೆ ಗುತ್ತಿಗೆದಾರರು ಕೂಡ ಆತ್ಮಹತ್ಯೆಯ ದಾಳಿ ತುಳಿಯುವುದಿಲ್ಲವೆ? ಈ ಹಿಂದೆ ಕಾಂಗ್ರೆಸ್‌ನವರು ಪ್ರತಿಪಕ್ಷದಲ್ಲಿದ್ದಾಗ ಏನೆಲ್ಲಾ ಬೊಬ್ಬೆ ಹೊಡೆಯುತ್ತಿದ್ದರು? ಈಗ ಅವರಿಗೆ ಗುತ್ತಿಗೆದಾರರ ಸ್ಥಿತಿ ಅರ್ಥವಾಗುತ್ತಿಲ್ಲವೆ ಎಂದು ಕಿಡಿಕಾರಿದರು.

ನಗರಸಭೆ ಮಾಜಿ ಅಧ್ಯಕ್ಷ ಎಂ.ಶಂಕರ್, ಪ್ರಮುಖರಾದ ಬಾಲು, ಸೋಗಾನೆ ರಮೇಶ್, ಮೋಹನ್ ಜಾಧವ್, ಗುರುಮೂರ್ತಿ, ಪ್ರಶಾಂತ್, ಟಾಕ್ರಾನಾಯ್ಕ ಸುದ್ದಿಗೋಷ್ಠಿಯಲ್ಲಿದ್ದರು.