ಕೊಳ್ಳೇಗಾಲ: ಚಾಮರಾಜನಗರ ಜಿಲ್ಲೆಯ ಹಾಲು ಒಕ್ಕೂಟವನ್ನು ಸ್ಥಾಪಿಸಲು ಎಷ್ಟು ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು. ಇಲ್ಲಿಯವರೆಗೆ ಎಷ್ಟು ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಬುಧವಾರ ವಿಧಾನಸಭೆ ಅಧಿವೇಶನದಲ್ಲಿ ಪ್ರಶ್ನಿಸಿದರು.
ಪ್ರಶ್ನೆಗೆ ಪ್ರತಿಕ್ರಿಯಿಸಿದ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್, 2013-14ನೇ ಸಾಲಿನಲ್ಲಿ 2013 ಜು.12 ಮುಖ್ಯಮಂತ್ರಿಗಳು ಆಯವ್ಯಯದಲ್ಲಿ ಚಾಮರಾಜನಗರಕ್ಕೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿಸುವ ಕುರಿತು ಘೋಷಿಸಿದ್ದರು. ಕರ್ನಾಟಕ ಸರ್ಕಾರದ ನಡವಳಿಗಳ ರೀತ್ಯಾ ಮೈಸೂರು-ಚಾಮರಾಜನಗರ ಹಾಲು ಒಕ್ಕೂಟವನ್ನು ವಿಭಜಿಸಿ ಚಾಮರಾಜನಗರ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟವನ್ನು ಸ್ಥಾಪಿಸಲು ಸರ್ಕಾರ 83 ಕೋಟಿ ರೂ. ತಾತ್ವಿಕ ಅನುಮೋದನೆ ನೀಡಲಾಗಿತ್ತು. ಸದರಿ ತಾತ್ವಿಕ ಅನುಮೋದನೆ ಷರತ್ತನ್ನು ಸಡಿಲಗೊಳಿಸಿ 2014 ಮೇ 28ರಂದು 83 ಕೋಟಿ ರೂ. ವೆಚ್ಚದಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿಸಲು ಆಡಳಿತಾತ್ಮಕ ನೀಡಲಾಯಿತು ಎಂದು ಮಾಹಿತಿ ನೀಡಿದರು.
ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಚಾಮುಲ್‌ಗೆ ಸರ್ಕಾರ ಕೊಟ್ಟಿರುವ ಮೊತ್ತವೆಷ್ಟು ಎಂದು ಮರು ಪ್ರಶ್ನೆ ಹಾಕಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, 2014-15ನೇ ಸಾಲಿನಲ್ಲಿ ಹೈನುಗಾರಿಕೆ ಮೂಲಸೌಕರ್ಯದಡಿ 11.10 ಕೋಟಿ ರೂ. ಹಾಗೂ 2015-16 ನೇ ಸಾಲಿನಲ್ಲಿ ರಾಷ್ಟ್ರೀಯ ಹೈನುಗಾರಿಕೆ ಯೋಜನೆಯಡಿ 20 ಕೋಟಿ ರೂ. ಬಿಡುಯಾಗಿದೆ. 51.89 ಕೋಟಿ ರೂ. ಬಾಕಿ ಮೊತ್ತ ಬಿಡುಗಡೆಯಾಗಬೇಕಿದೆ ಎಂದರು.
ಹಾಲು ಒಕ್ಕೂಟಕ್ಕೆ ಸರ್ಕಾರ ಬಾಕಿ ಅನುದಾನ ಬಿಡುಗಡೆ ಮಾಡದಿರುವುದರಿಂದ ಒಕ್ಕೂಟಕ್ಕೆ ಆರ್ಥಿಕ ನಷ್ಟ ಉಂಟಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಎಂದು ಶಾಸಕರು ಕೇಳಿದರು. ಇದಕ್ಕೆ ಸಚಿವರು ಬಂದಿದೆ ಎಂದು ಉತ್ತರಿಸಿದರು.
ಹಾಗಿದ್ದಲ್ಲಿ ಹಾಲು ಉತ್ಪಾದಕರಿಗೆ ನೆರವಾಗಲು ತುರ್ತಾಗಿ ಬಾಕಿ ಅನುದಾನ ಬಿಡುಗಡೆಗೊಳಿಸಲು ಸರ್ಕಾರ ಕ್ರಮಗಳೇನು ಎಂದು ಶಾಸಕರು ಮತ್ತೆ ದನಿ ಎತ್ತಿದರು.
ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟದ ಬಾಕಿ ಅನುದಾನ ಬಿಡುಗಡೆಗೊಳಿಸುವ ಪ್ರಸ್ತಾವನೆಯು ಇಲಾಖೆಯ ಪರಿಶೀಲನೆಯಲ್ಲಿದೆ ಎಂದು ಸಚಿವರು ತಿಳಿಸಿದರು.