ಜಿಲ್ಲೆ

ಕೇಂದ್ರ ವಿರುದ್ಧ ಶ್ವೇತಪತ್ರ ಬಿಡುಗಡೆ

ಸುನಿಲ್ ಪೊನ್ನೇಟಿ

ಮಡಿಕೇರಿ:

ಕೇಂದ್ರದ ಕೆಟ್ಟ ಆರ್ಥಿಕ ನೀತಿಗಳಿಂದಾಗಿ ದೇಶದ ಆರ್ಥಿಕತೆಯ ಬೆನ್ನೆಲುಬಾಗಿರುವ ಕರ್ನಾಟಕದಂಥ ರಾಜ್ಯಗಳ ಚೈತನ್ಯ ಸಂಕಷ್ಟಕ್ಕೆ ಸಿಲುಕಿಕೊಂಡಿದೆ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಆರೋಪಿಸಿದರು. ಇಲ್ಲಿನ ಪ್ರಸ್‌ಕ್ಲಬ್‌ನಲ್ಲಿ ಬುಧವಾರ ’ಮೋದಿ ಸರ್ಕಾರ ರಾಜ್ಯ ಸರ್ಕಾರಕ್ಕೆ ಮಾಡಿರುವ ಅನ್ಯಾಯ’ದ ಬಗ್ಗೆ ಶ್ವೇತಪತ್ರ ಬಿಡುಗಡೆ ಮಾಡಿ ಮಾತನಾಡಿದರು.

ಎಲ್ಲಾ ರೀತಿಯ ತೆರಿಗೆಗಳನ್ನು ಸಂಗ್ರಹಿಸಿ ಕೇಂದ್ರಕ್ಕೆ ಕೊಡುವಲ್ಲಿ ಮಹಾರಾಷ್ಟ್ರ ಮೊದಲನೇ ಸ್ಥಾನದಲ್ಲಿದ್ದರೆ, ಕರ್ನಾಟಕ ೨ನೇ ಸ್ಥಾನದಲ್ಲಿದೆ. ಕರ್ನಾಟಕದಿಂದ ಸುಮಾರು ೪ ಲಕ್ಷ ಕೋಟಿ ರೂ. ತೆರಿಗೆ ಕೇಂದ್ರಕ್ಕೆ ಹೋಗುತ್ತಿದೆ. ಆದರೆ ರಾಜ್ಯಕ್ಕೆ ವಾಪಸ್ ಕೇವಲ ೫೦-೫೩ ಸಾವಿರ ಕೋಟಿ ರೂ. ಮಾತ್ರ ಬರುತ್ತಿದೆ. ನೂರು ರೂ. ಸಂಗ್ರಹಿಸಿ ಕೊಟ್ಟರೆ ೧೨-೧೩ ರೂ. ಮಾತ್ರ ಹಿಂತಿರುಗಿ ಪಡೆಯುವ ಸ್ಥಿತಿ ಕರ್ನಾಟಕದ್ದಾಗಿದೆ. ೨೦೨೩-೨೪ನೇ ಸಾಲಿನಲ್ಲಿ ೫೦,೨೫೭ ಕೋಟಿ ರೂ. ರಾಜ್ಯದ ಪಾಲು ಕೊಡುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ಆದರೆ ನವೆಂಬರ್ ತನಕ ೩೨,೨೭೭ ಕೋಟಿ ರೂ. ಮಾತ್ರ ಬಂದಿದೆ.
೨೦೧೪ರಲ್ಲಿ ದೇಶದ ಸಾಲ ೫೩.೧೧ ಲಕ್ಷ ಕೋಟಿ ರೂ. ಇತ್ತು. ಆದರೆ ಮೋದಿ ಸರ್ಕಾರ ಬಂದ ನಂತರ ಈ ಸಾಲದ ಮೊತ್ತ ೧೭೩ ಲಕ್ಷ ಕೋಟಿ ರೂ. ಆಗಿದೆ. ರಿಸರ್ವ್ ಬ್ಯಾಂಕ್ ಸಾಲ ೨೫ ಲಕ್ಷ ಕೋಟಿ ಇದ್ದಿದ್ದು ೮೫ ಲಕ್ಷ ಕೋಟಿ ಆಗಿದೆ. ದೇಶದ ಸಾಲ ಈಗ ಒಟ್ಟು ೨೭೮ ಲಕ್ಷ ಕೋಟಿ ಒಟ್ಟು ಇದ್ದು, ದೇಶದ ಜನಸಂಖ್ಯೆ ನೋಡಿದರೆ ಪ್ರತಿಯೊಬ್ಬರ ಮೇಲೆ ೪.೫ ಲಕ್ಷ ರೂ. ಸಾಲ ಇದೆ. ಬಿಜೆಪಿ ಸರ್ಕಾರ ಬಂದ ಮೇಲೆ ಒಂದು ಅಣೆಕಟ್ಟೆ ಕೂಡ ಕಟ್ಟಿಲ್ಲ. ಹಾಗಾದರೆ ಸಾಲ ಮಾಡಿದ ಹಣವೆಲ್ಲಾ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.

ಕಾರ್ಪೊರೇಟ್ ಸಾಲ ೨೦.೫ ಲಕ್ಷ ಕೋಟಿ ರೂ. ಮನ್ನಾ ಮಾಡಲಾಗಿದೆ. ಬಡವರು, ರೈತರ ಬಗ್ಗೆ ಕಾಳಜಿ ಇಲ್ಲ. ಕರ್ನಾಟಕದ ಮೇಲೆ ನಿರಂತರ ಮಲತಾಯಿ ಧೋರಣೆ, ತೋರಿಸಲಾಗುತ್ತಿದೆ. ಬರ ಬಂದು ಜನ ತತ್ತರಿಸಿದ್ದಾರೆ. ೩೫ ಸಾವಿರ ಕೋಟಿ ರೂ. ನಷ್ಟದ ಅಂದಾಜು ಮಾಡಲಾಗಿದೆ. ಆದರೆ ಕೇಂದ್ರದಿಂದ ೩೫ ಪೈಸೆಯೂ ಬಂದಿಲ್ಲ ಎಂದು ಆರೋಪಿಸಿದರು.

ಅಭಿವೃದ್ಧಿ ಕೆಲಸ ಮಾಡದ ಬಿಜೆಪಿ ಭಾವನಾತ್ಮ ವಿಚಾರ ಇಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದೆ. ಕರಾವಳಿಯಿಂದ ಹಳೆ ಮೈಸೂರು ಭಾಗಕ್ಕೆ ಕೋಮುವಾದ ಪ್ರಯೋಗ ವರ್ಗಾ ಮಾಡಲಾಗಿದೆ. ಹಸಿರು ಸಾಲು ರಾರಾಜಿಸುತ್ತಿದ್ದ ಮಂಡ್ಯಕ್ಕೆ ಕೇಸರಿ ಸಾಲು ತಂದಿದ್ದಾರೆ. ಆದರೆ ಬಿಜೆಪಿ ಚಿತಾವಣೆಯನ್ನು ಜನರು ಅರಿತುಕೊಂಡಿದ್ದಾರೆ ಎಂದರು.


ಕೆಪಿಸಿಸಿ ಸದಸ್ಯ ರಮಾನಾಥ ಬೇಕಲ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುರಯ್ಯ ಅಬ್ರಾರ್, ಕೊಡಗು ಸಾಮಾಜಿಕ ಜಾಲತಾಣ ಸಂಚಾಲಕ ಸೂರಜ್ ಹೊಸೂರು, ಮೈಸೂರು ಜಾಲತಾಣ ಸಂಚಾಲಕ ಮಹೇಶ್ ಇದ್ದರು.