ಜಿಲ್ಲೆ

ಪ್ರಾಧಿಕಾರದ ನಿರ್ದೇಶನದಂತೆ ನೀರು ಬಿಡುಗಡೆ

ಅವಿನಾಶ್ ಜೈನಹಳ್ಳಿ

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಪ್ರಾಧಿಕಾರದ ನಿರ್ದೇಶನದಂತೆ ನಡೆದುಕೊಳ್ಳಬೇಕಿದೆ. ಇದೇ ಕಾರಣಕ್ಕೆ ರಾಜ್ಯದಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ತನ್ವೀರ್ ಸೇಠ್ ತಿಳಿಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ವ ಪಕ್ಷ ಸಭೆಯಲ್ಲಿ ಮುಂದೇನು ಮಾಡಬೇಕೆಂದು ತೀರ್ಮಾನಿಸಲಾಗುತ್ತದೆ. ಕಾವೇರಿ ವಿಚಾರ ಮುಂದಿಟ್ಟುಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳಬಾರದು. ಸರ್ವ ಪಕ್ಷಗಳ ಸಭೆಗೆ ಆಹ್ವಾನ ಬಂದರೆ ಹೋಗುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್‌ಗೆ ಆಪರೇಷನ್ ಹಸ್ತ ಅಗತ್ಯವಿಲ್ಲ: ಕಾಂಗ್ರೆಸ್‌ಗೆ ಆಪರೇಷನ್ ಹಸ್ತದ ಅವಶ್ಯಕತೆ ಇಲ್ಲ. ಜನತೆ ನಮಗೆ 135 ಸ್ಥಾನ ಕೊಟ್ಟು ಪೂರ್ಣ ಬಹುಮತ ನೀಡಿದ್ದಾರೆ. ಈ ಸಂದರ್ಭದಲ್ಲಿ ಆಪರೇಷನ್ ಹಸ್ತದ ಅವಶ್ಯಕತೆಯಿಲ್ಲ ಎಂದರು.

ಪಕ್ಷಾಂತರ ನಿಷೇಧ ಕಾಯ್ದೆ ಪರಿಣಾಮಕಾರಿಯಾಗಿದೆ. ಆದರೂ ರಾಜೀನಾಮೆ ನೀಡಿ ಜನರ ಬಳಿಗೆ ಹೋಗೋದು ಎಷ್ಟರ ಮಟ್ಟಿಗೆ ಸರಿ? ಆಪರೇಷನ್ ಕಮಲ ಅನ್ನೋದನ್ನು ತಂದಿದ್ದೇ ಬಿಜೆಪಿಯವರು. ಈ ವಿಚಾರಕ್ಕೆ ಹೆಚ್ಚಿನ ಮನ್ನಣೆ ನೀಡುವುದಿಲ್ಲ ಎಂದು ಹೇಳಿದರು.

ಬರುವ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿ ಕೈಬಿಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಈ ವಿಚಾರವಾಗಿ ನಮ್ಮ ಸಹಮತ ಇದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಹೆಸರಿನಲ್ಲಿ ಶಿಕ್ಷಣದ ಕೇಸರೀಕರಣ ನಡೆಯುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಹೀಗಾಗಿ ರಾಜ್ಯಕ್ಕೆ ಪೂರಕವಾದ ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡರೆ ತಪ್ಪಲ್ಲ ಎಂದರು.