ಮೈಸೂರು: ಹೊರಗಿನ ಪ್ರಪಂಚದ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಮ್ಮದೇ ಜಗತ್ತನ್ನು ಸೃಷ್ಟಿಸಿಕೊಂಡಾಗ ಮಾತ್ರ ಉತ್ತಮವಾದ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಹೇಳಿದರು.
ಜಿಎಸ್‌ಎಸ್ ಪಬ್ಲಿಕೇಷನ್ಸ್ ವತಿಯಿಂದ ಎಂಬಿಸಿಟಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಯೋಗಾತ್ಮ ಶ್ರೀಹರಿ ಅವರ ರಚನೆಯ ‘ಲ್ೈ ಮ್ಯಾನೇಜ್‌ಮೆಂಟ್ ಸಕ್ಸಸ್ ಸೂತ್ರಗಳು’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದಿನಿಂದಲೂ ವರ್ತಮಾನದ ಜಗತ್ತು ಹಾಳಾಗಿದೆ ಎಂದು ಹೇಳುತ್ತಿದ್ದಾರೆ. ಶಾಲೆಗಳಲ್ಲಿ ಪ್ರಾರ್ಥನೆ ಸಮಯದಲ್ಲಿ ಸುದ್ದಿ ಪತ್ರಿಕೆ ಓದುತ್ತಿದ್ದೆವು. ಆದರೆ, ಈಗ ಪತ್ರಿಕೆಗಳ ಹೆಡ್ ಲೈನ್ ನೋಡಿದ ಕೂಡಲೇ ಏನು ಓದಿಸಬೇಕು ಎಂದು ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕೆ ನಮ್ಮ ಬಳಿ ಪರಿಹಾರವಿದ್ದರೂ ಗೊಣಗುವರು ಹೆಚ್ಚಾಗಿದ್ದಾರೆ ಎಂದ ಅವರು, ಜಗತ್ತಿನ ಯಾವುದೇ ಸಂತನೂ ಕಾಲಘಟ್ಟ ಹಾಳಾಗಿದೆ ಎನ್ನುವುದಿಲ್ಲ. ಹಾಗಾಗಿ, ಕಾಲಕ್ಕೆ ತಲೆ ಕೆಡಿಸಿಕೊಳ್ಳದೆ ಮೊದಲು ನಾವು ಬದಲಾಗಬೇಕು ಎಂದರು.
ಉತ್ತಮವಾಗಿ ಬದುಕಬೇಕು ಎಂದರೆ ಹೊರಗಿನ ಪ್ರಪಂಚಕ್ಕೆ ತಲೆ ಕೆಡಿಸಿಕೊಳ್ಳಬಾರದು. ಜಗತ್ತು ಯಾವಾಗಲೂ ಹೀಗೆ ಇತ್ತು. ಈಗ ಮಾಧ್ಯಮಗಳಿಂದ ಕೆಲ ವಿಚಾರಗಳು ಹೊರಗೆ ಬರುತ್ತಿವೆ ಅಷ್ಟೆ. ಆದ್ದರಿಂದ ಉತ್ತಮವಾಗಿ ಬದುಕಲು ನಮ್ಮದೇ ಜಗತ್ತು ಸೃಷ್ಟಿ ಮಾಡಿಕೊಳ್ಳಬೇಕು. ದ್ವೇಷ, ಅಸೂಯೆಗಳನ್ನು ಬಿಡಬೇಕು. ನಾವು ಯಾರ ಜತೆ ಬದುಕಬೇಕು. ಹೇಗೆ ಬದುಕಬೇಕು ಎಂದು ನಾವು ನಿರ್ಧಾರ ಮಾಡಬೇಕು. ನಾವು ಬದಲಾಗಬೇಕೇ ವಿನಾ ಪ್ರಪಂಚ ಅಲ್ಲ ಎಂದರು.
ಚಂಚಲ ಮನಸ್ಸು ಮನುಷ್ಯನ ಸಹಜ ಗುಣ. ಆದರೆ, ನಾವು ಹೇಳಿದನ್ನು ನಮ್ಮ ಮೈಂಡ್ ಮಾಡುತ್ತದೆ. ನಮಗೆ ಸರಿಯಾದ ಗುರಿ ಇದ್ದರೆ ಜೀವನ ಸುಂದರವಾಗುತ್ತದೆ. ನಮ್ಮ ಮನಸ್ಸನ್ನು ಸರಿಯಾಗಿ ಪ್ರೋಗ್ರಾಮ್ ಮಾಡಿದರೆ ನಮಗೆ ಬೇಕಾದ ಯಶಸ್ಸಿನ ಸೂತ್ರವನ್ನು ನಮ್ಮ ಮೈಂಡ್ ದಾನ ಮಾಡುತ್ತದೆ ಎಂದರು.
‘ಲ್ೈ ಮ್ಯಾನೇಜ್‌ಮೆಂಟ್ ಸಕ್ಸಸ್ ಸೂತ್ರಗಳು’ ಪುಸ್ತಕವನ್ನು ಯಾರೇ ಓದಿದರು ಬೇರೆ ರೀತಿ ಯೋಚನೆ ಮಾಡಲು ಶುರು ಮಾಡುತ್ತಾರೆ. ಸೂಕ್ಷ್ಮತೆ ಇರುವವರು ಓದಿದಾಗ ಅವರ ಯೋಚನೆ ಕ್ರಮವೂ ಬದಲಾಗುತ್ತದೆ. ಸ್ವಲ್ಪ ಸೂಕ್ಷ್ಮತೆ ಇದ್ದರೂ ಈ ಪುಸ್ತಕ ಕಾಡುತ್ತದೆ. ಅನೇಕ ವಿಷಯಗಳ ಬಗ್ಗೆ ಕಣ್ತೆರೆಸುತ್ತದೆ. ಎಲ್ಲರ ಬದುಕು ಹಸಿರಾಗಬೇಕು. ಜನ ಸಂತೋಷದಿಂದ ಬದುಕಬೇಕು. ಎಲ್ಲರೂ ಸುಖವಾಗಿರಬೇಕು ಎಂಬುದು ಪುಸ್ತಕದಲ್ಲಿ ಅಡಕವಾಗಿದೆ ಎಂದರು.
ಶ್ರೀಹರಿ ಅವರು ಇಲ್ಲಿ ಬರೆದಿರುವುದು ಎಲ್ಲಿಯೂ ಓದಿರುವುದಲ್ಲ. ಅವರ ಅನುಭವ, ಪ್ರಯೋಗ ಬರೆದಿದ್ದಾರೆ. ಶ್ರೀಹರಿ ಅವರೇ ಒಂದು ಅದ್ಭುತ, ಎಂತಹ ಸಂದರ್ಭದಲ್ಲೂ ಅವರ ನಿರ್ಧಾರಗಳು ಅದ್ಭುತ ಎನ್ನುವಂತೆ ಇರುತ್ತದೆ ಎಂದರು.
ವಿಜಯ ವಿಠಲ ವಿದ್ಯಾಶಾಲೆಯ ಕಾರ್ಯದರ್ಶಿ ವಾಸುದೇವ ಭಟ್ ಮಾತನಾಡಿ, ಶ್ರೀಹರಿ ಅವರು ಪುಸ್ತಕದಲ್ಲಿ ಬಹಳಷ್ಟು ವಿಷಯ ತಿಳಿಸಿದ್ದಾರೆ. ಜೀವನ ಸತ್ಯಗಳಿಗೆ ಅಕ್ಷರ ರೂಪ ನೀಡಿದ್ದಾರೆ. ಇಂತಹ ಪುಸ್ತಕಗಳ ಮೂಲಕ ನಮ್ಮ ಜೀವನದ ಯಶಸ್ಸು ತಿಳಿಸಲು ಮುಂದಾಗಿದ್ದಾರೆ. ಅವರು ಯಾವುದೇ ಕೆಲಸ ಮಾಡಿದರೂ ನಮಗೆ ಖುಷಿ. ಅವರು ಒಳ್ಳೆಯ ಹಾಗೂ ಸೃಜನಶೀಲವಾಗಿ ಕೆಲಸ ಮಾಡುತ್ತಾರೆ ಎಂದರು.
ಈ ಪುಸ್ತಕವನ್ನು ಎಲ್ಲರೂ ಓದಬೇಕು. ಪುಸ್ತಕದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಯನ್ನೂ ಬಳಸಿದ್ದಾರೆ. ಇಂದಿನ ಯುವ ಜನಾಂಗಕ್ಕೆ ಅನುಗುಣವಾಗಿ ಭಾಷೆ ಬಳಸಿದ್ದಾರೆ ಎಂದರೆ ತಪ್ಪಾಗಲಾರದು. ಅವರು ಮುಂದೆ ಇನ್ನೂ ಹೆಚ್ಚು ಪುಸ್ತಕ ಬರೆಯಲಿ ಎಂದರು.
ಯೋಗಾತ್ಮ ಶ್ರೀಹರಿ, ಮಹಾಜನ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಮುರಳಿ, ರೋಟರಿ 3181 ಜಿಲ್ಲಾ ಗವರ್ನರ್ ಎಚ್.ಆರ್.ಕೇಶವ್, ಹಿರಿಯ ಪತ್ರಕರ್ತ ಎಂ.ಆರ್.ಸತ್ಯನಾರಾಯಣ್, ಸಿ.ಕೆ.ಮಹೇಂದ್ರ, ರಮೇಶ್ ಉತ್ತಪ್ಪ ಇದ್ದರು.