ಜಿಲ್ಲೆ

ಶುಚಿ ಯೋಜನೆಗೆ 470 ಕೋಟಿ ರೂ ಬಿಡುಗಡೆ: ಎಂಎಲ್‌ಸಿ ಮಧುಮಾದೇಗೌಡ ಪ್ರಶ್ನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ

ಮಂಡ್ಯ: ಪ್ರಸ್ತಕ ಸಾಲಿನಲ್ಲಿ ಶಾಲಾ ಹೆಣ್ಣು ಮಕ್ಕಳಿಗೆ ಶುಚಿ ಯೋಜನೆಯಡಿ ಸ್ಯಾನಿಟರಿ ನ್ಯಾಪ್ಕಿನ್ ಪ್ಯಾಡ್ ವಿತರಿಸಲಾಗುವುದು. ಇದಕ್ಕಾಗಿ 470 ಕೋಟಿ ರೂ ಅನುದಾನವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯ ಮಧು ಜಿ.ಮಾದೇಗೌಡ ಅವರ ಪ್ರಶ್ನೆಗೆ ಮಂಗಳವಾರ ಲಿಖಿತ ಉತ್ತರ ನೀಡಿರುವ ಸಚಿವರು, ಶುಚಿ ಕಾರ್ಯಕ್ರಮದಡಿ ಸ್ಯಾನಿಟರಿ ನ್ಯಾಪ್ಕಿನ್ ಪ್ಯಾಡ್‌ಗಳನ್ನು ಸಂಗ್ರಹಿಸಿ ಸರಬರಾಜು ಮಾಡಲು ಅಲ್ಪಾವಧಿ ಟೆಂಡರ್ ಅನ್ನು ಆಹ್ವಾನಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಅದರಂತೆ ಕೆಎಸ್‌ಎಂಎಸ್‌ಸಿಎಲ್ ವತಿಯಿಂದ ಶೀಘ್ರದಲ್ಲೇ ಅಲ್ಪಾವಧಿ ಟೆಂಡರ್ ಕರೆಯಲಾಗುವುದು. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ 60 ದಿನಗಳಲ್ಲಿ ಸರಬರಾಜು ಪೂರ್ಣಗೊಳಿಸಲಾಗುವುದು. ಈ ಯೋಜನೆಯಡಿ 19,29,355 ಫಲಾನುಭವಿಗಳನ್ನು ಗುರುತಿಸಲಾಗಿದೆ ಎಂದು ಹೇಳಿದ್ದಾರೆ.

ಶಾಲೆಯಲ್ಲಿ ಹೆಣ್ಣು ಮಕ್ಕಳು ಬಳಸಿದ ಪ್ಯಾಡ್‌ಗಳನ್ನು ಒಂದು ಕಾಗದದಲ್ಲಿ ಸುತ್ತಿ ಸ್ಯಾನಿವೇಷ್ಟ್ ಬುಟ್ಟಿಯಲ್ಲಿ ವಿಲೇವಾರಿ ಮಾಡಲು ಅಗತ್ಯ ವ್ಯವಸ್ಥೆ ಕಲ್ಪಿಸುವಂತೆ ಶಿಕ್ಷಣ ಇಲಾಖೆಗೆ ತಿಳಿಸಲಾಗಿದೆ. ಅಲ್ಲದೆ, ಬಳಸಿದ ಪ್ಯಾಡ್‌ಗಳ ಮೇಲೆ ವೈಜ್ಞಾನಿಕ ವಿಲೇವಾರಿ ಕುರಿತು ಸ್ಪಷ್ಟ ಮಾಹಿತಿ ಮತ್ತು ಚಿತ್ರಣ ನೀಡಲಾಗಿರುತ್ತದೆ. 2023-24ನೇ ಸಾಲಿನ ಸಂಗ್ರಹಣೆ ಮತ್ತು ಅನುಷ್ಠಾನ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಆರೋಗ್ಯ ಇಲಾಖೆಯಡಿ ಆರೋಗ್ಯ ಕೇಂದ್ರ/ಆಸ್ಪತ್ರೆಗಳಿಗೆ ಜೈವಿಕ ತ್ಯಾಜ್ಯದ ವಿಲೇವಾರಿ ಸೇವೆಯನ್ನು ಒದಗಿಸುತ್ತಿರುವ ಮಾನ್ಯತೆ ಪಡೆದ ಏಜೆನ್ಸಿ/ ಸಂಸ್ಥೆಗಳಿಂದ ಶಾಲಾ-ಕಾಲೇಜುಗಳಲ್ಲಿ ಬಳಸಿದ ಪ್ಯಾಡ್‌ಗಳ ವಿವೇವಾರಿಗೆ ನಿರ್ದೇಶನ ನೀಡಲಾಗುವುದು ಎಂದು ವಿವರಿಸಿದ್ದಾರೆ.