ಬಳ್ಳಾರಿ ನಗರದ ಬಸವರಾಜೇಶ್ವರಿ ಪಿಯು ಕಾಲೇಜಿನಲಿ ಶನಿವಾರ ಏರ್ಪಡಿಸಿದ್ದ ಸಾಹಿತಿ ವೀರೇಂದ್ರ ರಾವಿಹಾಳ ಅವರ ‘ಡಂಕಲ್ ಪೇಟೆ’ ಕಥಾಸಂಕನವನ್ನು ಚಿಂತಕ ನಟರಾಜ ಬೂದಾಳು ಬಿಡುಗಡೆಗೊಳಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ನಿಷ್ಟಿ ರುದ್ರಪ್ಪ, ಡಾ.ದಸ್ತಗೀರಸಾಬ್ ದಿನ್ನಿ, ಡಾ.ಅರವಿಂದ ಪಟೇಲ್, ಜಯಶ್ರೀ ರಾವಿಹಾಳ ಮತ್ತಿತರರಿದ್ದರು.  
ಜಿಲ್ಲೆ

ಓದುಗರಲ್ಲಿ ಕುತೂಹಲ ಮೂಡಲಿ

Bellari - Heera Nayak

ಬಳ್ಳಾರಿ : ಇಂದಿನ ಡಿಜಿಟಲ್ ಯುಗದಲ್ಲಿ ಓದುಗರ ಸಂಖ್ಯೆ ಕಡಿಮೆ ಆಗುತ್ತಿದ್ದು, ಓದುಗರಲ್ಲಿ ಕುತೂಹಲ ಮೂಡಿಸುವ ಸಾಹಿತ್ಯಗಳು ಹೊರಹೊಮ್ಮಬೇಕಿದೆ ಎಂದು ಚಿಂತಕ ನಟರಾಜ ಬೂದಾಳು ಹೇಳಿದರು.

ಇಲ್ಲಿನ ಬಸವರಾಜೇಶ್ವರಿ ಪಿಯು ಕಾಲೇಜಿನಲ್ಲಿ ವಿಜಯ ಬುಕ್ಸ್ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶನಿವಾರ ಸಂಜೆ ಏರ್ಪಡಿಸಿದ್ದ ಸಾಹಿತಿ ವೀರೇಂದ್ರ ರಾವಿಹಾಳ ಅವರ ‘ಡಂಕಲ್ ಪೇಟೆ’ ಕಥಾಸಂಕನವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಸಂಕಲನದ ಶೀರ್ಷಿಕೆಯು ವಿಶ್ವವಾಣಿಜ್ಯ ಒಪ್ಪಂದದ ಡಂಕಲ್ ಪ್ರಸ್ತಾವನೆಯನ್ನು ನೆನಪಿಗೆ ತರುತ್ತದೆ ಎಂದರಲ್ಲದೆ ಓದುಗರಲ್ಲೂ ಓದುವ ಕುತೂಹಲವನ್ನುಂಟು ಮಾಡುತ್ತದೆ ಎಂದು ಅಭಿಪ್ರಾಯಪಟ್ಟರು.

ಹಿಂದೆ ದೇಶವನ್ನು ತಲ್ಲಣಕ್ಕೀಡು ಮಾಡಿದ್ದ ಡಂಕಲ್ ಪ್ರಸ್ತಾವನೆಯ ರೀತಿಯಲ್ಲೇ ಇಲ್ಲಿನ ಕಥೆಗಳೂ ಸಹ ಓದುಗನಲ್ಲಿ ತಲ್ಲಣಗಳನ್ನು ಸೃಷ್ಟಿಸುವ ಮತ್ತು ಚಿಂತನೆಗೆ ಹಚ್ಚುವ ಗುಣ ಹೊಂದಿವೆಯಲ್ಲದೆ, ರಾವಿಹಾಳರ ಕಥನಕ್ರಿಯೆಗೆ ಯಾವ ರಿಯಾಯಿತಿಯ ಅಗತ್ಯವೂ ಇಲ್ಲ. ಇದು ಅವರ ಮೊದಲ ಕಥಾಸಂಕಲನವೆಂಬ ಭಾವನೆಯು ಓದುಗನಲ್ಲಿ ಎಲ್ಲೂ ಮೂಡುವುದಿಲ್ಲ. ಓದಿಸಿಕೊಂಡು ಹೋಗುವ ಗುಣ ಹೊಂದಿರುವ ಇಲ್ಲಿನ ಕಥೆಗಳು ಮತ್ತು ಬಳಸಿದ ನಿರೂಪಣಾ ವಿಧಾನವು ಕುತೂಹಲಕಾರಿಯಾಗಿವೆ ಎಂದರು.

ಈ ಕಥೆಗಳಿಗೆ ಯಾರ ಹೆಗಲಿನ ಅಗತ್ಯವೂ ಇಲ್ಲ. ಮುಂಬರುವ ದಿನಗಳಲ್ಲಿ ಮತ್ತಷ್ಟು ಕಥೆಗಳನ್ನು ಕಾದಂಬರಿಗಳನ್ನು ಬರೆಯಲಿ ಎಂದು ಹಾರೈಸಿದರು.

ಕಥಾ ಸಂಕಲನದ ಬಗ್ಗೆ ಮಾತನಾಡಿದ ಸಾಹಿತಿ ಡಾ.ದಸ್ತಗೀರಸಾಬ್ ದಿನ್ನಿ, ಸಾಮಾಜಿಕ ವೈರುಧ್ಯಗಳಿಗೂ ಹಾಗೂ ವರ್ತಮಾನದ ತಲ್ಲಣಗಳಿಗೂ ತೀವ್ರವಾಗಿ ತೆರೆದುಕೊಂಡಿರುವ ಇಲ್ಲಿನ ಕಥೆಗಳು ಸಹಜವಾಗಿ ಅರಳಿಕೊಂಡಿವೆ. ರಾವಿಹಾಳ ಅವರು ನೆಲದ ಭಾಷೆಯ ನುಡಿಗಟ್ಟನ್ನು ಕಥನ ಕಲೆಯ ಕಲೆಗಾರಿಕೆಯನ್ನು ರೂಡಿಸಿಕೊಂಡು ತಮ್ಮದೆ ಆದ ಅಸ್ಮಿತೆಯನ್ನು ಕಂಡುಕೊಳ್ಳಲು ಯತ್ನಿಸಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ನಿಷ್ಟಿ ರುದ್ರಪ್ಪ ಮಾತನಾಡಿ, ಲೇಖಕ ವೀರೇಂದ್ರ ರಾವಿಹಾಳ ಅವರು ನೆಲದ ಭಾಷೆಯನ್ನು ತಮ್ಮ ಕಥೆಗಳಲ್ಲಿ ಸಮರ್ಥವಾಗಿ ದುಡಿಸಿಕೊಂಡಿದ್ದು ಅವರ ಕಥೆಗಳು ಮಾನವೀಯತೆಗಾಗಿ ಮಿಡಿಯುತ್ತಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಾಹಿತಿ ಡಾ.ಅರವಿಂದ ಪಟೇಲ್, ಜಯಶ್ರೀ ರಾವಿಹಾಳ, ವಾಣಿ ಅಜಯ ಬಣಕಾರ, ಲೋಹಿಯಾ ಚನ್ನಬಸವಣ್ಣ, ಚೋರನೂರು ಕೊಟ್ರಪ್ಪ, ಮಕ್ಕಳ ಸಾಹಿತಿ ಶಿವಲಿಂಗಪ್ಪ ಹಂದಿಹಾಳು, ಕವಿ ಅಜಯ ಬಣಕಾರ ಇನ್ನಿತರರಿದ್ದರು.