ಜಿಲ್ಲೆ

ಪ್ರೀತಿ, ಸಾಹಿತ್ಯಾಭಿಮಾನಕ್ಕೆ ಕೂ.ಗೋ. ಹೆಸರುವಾಸಿ...

ಸಾಹಿತಿ ವಿ.ಗಣೇಶ ಬಣ್ಣನೆ

ಸಮಗ್ರ ಸಾಹಿತ್ಯ ಪುಸ್ತಕಗಳ ಬಿಡುಗಡೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಬರೆದ ಪುಸ್ತಕವನ್ನು ಕೊಂಡು ಓದಿದಾಗಲೇ ಓದುಗರು ಲೇಖಕನಿಗೆ ನೀಡುವ ಕೊಡುಗೆಯಾಗಿದೆ. ಬರೆದಿದ್ದನ್ನು ಜನರು ಓದಿದಾಗ ಲೇಖಕನೂ ಸಂತೋಷಗೊಳ್ಳುತ್ತಾನೆ. ಹೆಸರು, ಪ್ರೀತಿ, ವಿಶ್ವಾಸ, ಸಾಹಿತ್ಯಾಭಿಮಾನಕ್ಕೆ ಕು.ಗೋ. ಹೆಸರುವಾಸಿ ಆಗಿದ್ದಾರೆ. ಸಾಹಿತ್ಯ ಇರುವವರೆಗೆ ಅವರು ಹಾಗೂ ಅವರ ಹಾಸ್ಯಪ್ರಜ್ಞೆ ಅಜರಾಮರ ಎಂದು ಸಾಹಿತಿ ವಿ.ಗಣೇಶ ಬಣ್ಣಿಸಿದರು.

ಉಡುಪಿಯ ಇಂದ್ರಾಳಿಯಲ್ಲಿರುವ ಹಿರಿಯ ಕು.ಗೋ. (ಗೋಪಾಲಕೃಷ್ಣ ಭಟ್​) ಅವರ ವಾಗ್ದೇವಿ ನಿವಾಸದಲ್ಲಿ ಏ.13ರಂದು ಸಂಜೆ ಆಯೋಜಿಸಿದ್ದ ಕು.ಗೋ. ಸಮಗ್ರ ಸಾಹಿತ್ಯ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಓದುವ ಪರಿಪಾಠ ಬೆಳೆಸಿ

ಪಾಲಕರು ತಮ್ಮ ಮಕ್ಕಳಿಗೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಓದುವಂತೆ ಅವರನ್ನು ಹುರಿದುಂಬಿಸಬೇಕು. ಮೊಬೈಲ್​ನಲ್ಲಿ ಸಮಯ ವ್ಯರ್ಥ ಮಾಡುವುದನ್ನು ತಪ್ಪಿಸಿ ಪುಸ್ತಕ ಓದುವ ಪರಿಪಾಠ ಬೆಳೆಸಬೇಕು. ಅದರಿಂದ ಅವರಿಗೆ ಹೆಚ್ಚಿನ ಜ್ಞಾನ ಲಭಿಸುತ್ತದೆ ಎಂದರು.

ಮೊಮ್ಮಕ್ಕಳಿಂದ ಪುಸ್ತಕ ಬಿಡುಗಡೆ

ಕು.ಗೋ ಅವರ ಮೊಮ್ಮಕ್ಕಳಾದ ಸಂತೃಪ್ತ ಹೆರ್ಗ, ಪ್ರತೀಕ್ಷಾ ಬಿ., ವಿಘ್ನೇಶ ಭಟ್​ ಅವರುಗಳು ಪುಸ್ತಕ ಬಿಡುಗಡೆ ಮಾಡಿದರು. ಸಾಹಿತಿ ಡಾ. ಪಾದೇಕಲ್ಲು ವಿಷ್ಣು ಭಟ್​ ಅಧ್ಯಕ್ಷತೆ ವಹಿಸಿದ್ದರು. ಪುಸ್ತಕ ಪ್ರಕಾಶಕರಾದ ವಿ.ಎಸ್​. ನಾಗಮಣಿ, ಸಾಹಿತಿ ಅಂಬ್ರಯ್ಯ ಮಠ ಉಪಸ್ಥಿತರಿದ್ದರು.

ಉಡುಪಿ ತಾಲೂಕು ಕಸಾಪ ಅಧ್ಯಕ್ಷ ರವಿರಾಜ ಎಚ್​.ಪಿ. ಸ್ವಾಗತಿಸಿದರು. ಸಂಧ್ಯಾ ಶೆಣೈ ವಂದಿಸಿದರು. ಶ್ರೀನಿವಾಸ ಉಪಾಧ್ಯ ಕಾರ್ಯಕ್ರಮ ನಿರೂಪಿಸಿದರು.

ಬದುಕಿನಲ್ಲಿ ಯಾರೊಂದಿಗೂ ನಿಷ್ಟುರನಾಗಿಲ್ಲ. ಪುಸ್ತಕಗಳನ್ನು ಉಚಿತವಾಗಿ ಹಂಚಿದ್ದೇನೆ. ಬೇಕಾದವರಿಗೆಲ್ಲ ಪುಸ್ತಕ ನೀಡಿದ್ದೇನೆ. ಇಂದೂ ಸಹ ಕಾರ್ಯಕ್ರಮಕ್ಕೆ ಬಂದವರಿಗೆಲ್ಲ ಸಮಗ್ರ ಸಾಹಿತ್ಯ ಸಂಪುಟದ ಪ್ರತಿ ಉಚಿತವಾಗಿ ನೀಡಿದ್ದೇನೆ. ಬದುಕಿರುವವರೆಗೂ ಪುಸ್ತಕ ಹಂಚುತ್ತೇನೆ. ಇಂದಿನ ದಿನ ಜೀವನದ ಸಾರ್ಥಕ್ಯದ ಕ್ಷಣವಾಗಿದೆ. | ಕು.ಗೋ. ಹಿರಿಯ ಸಾಹಿತಿ