ಜಿಲ್ಲೆ

ಕೊಡವ ಮಕ್ಕಡ ಕೂಟದ ೬೩ನೇ ಪುಸ್ತಕ ಹೊಂಬೆಳಕು ಬಿಡುಗಡೆ

ಮಡಿಕೇರಿ: ಬರಹಗಾರ, ನಟ, ನಿರ್ದೇಶಕ, ನಿರ್ಮಾಪಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಬರೆದಿರುವ ಕೊಡವ ಮಕ್ಕಡ ಕೂಟದ ೬೩ನೇ ಪುಸ್ತಕ ಹೊಂಬೆಳಕು ಪುಸ್ತಕವನ್ನು ಹಿರಿಯ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಬಿಡುಗಡೆ ಮಾಡಿದರು.


ನಗರದ ಪತ್ರಿಕಾಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಾಮಾಜಿಕ ಕಳಕಳಿಯ ಪುಸ್ತಕ ಇದಾಗಿದೆ. ಮಕ್ಕಳಿಲ್ಲದ ಮನಸ್ಸುಗಳ ತುಡಿತ, ದತ್ತು ಶಿಶು ಸ್ವೀಕಾರದ ಸಾಮಾಜಿಕ ಜಾಗೃತಿ, ಜಾತಿಯನ್ನು ಮೀರಿದ ಮಾನವೀಯತೆ, ಪ್ರೀತಿ, ಸೌಹಾರ್ದತೆ, ಕುತೂಹಲ ಸೇರಿದಂತೆ ಅನೇಕ ಭಾವನಾತ್ಮಕ ವಿಚಾರಧಾರೆಗಳಿಗೆ ಒತ್ತು ನೀಡಿ ಕಥೆಯನ್ನು ಬರೆಯಲಾಗಿದೆ. ಇದು ಪ್ರಗತಿಪರ ಚಿಂತನೆಯ ಪುಸ್ತಕವಾಗಿದ್ದು, ಕೊಡವ ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಹೊಂಬೆಳಕು ಪುಸ್ತಕ ರಚನೆಕಾರ ಚಿತ್ರ ನಿರ್ದೇಶಕ, ನಟ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಮಾತನಾಡಿ, ನಾನು ಸ್ವತ: ಕಂಡ ಕೆಲವು ಘಟನೆಗಳನ್ನು ಪುಸ್ತಕದ ರೂಪದಲ್ಲಿ ಹೊರತಂದಿದ್ದೇನೆ. ಮೊಬೈಲ್ ಪ್ರಪಂಚದಲ್ಲಿ ಕಾದಂಬರಿಗಳು ಬಾಂಧವ್ಯ ವೃದ್ಧಿಸುವ ಕೆಲಸ ಮಾಡುತ್ತಿದ್ದು, ಸಾಹಿತ್ಯದ ಬಗ್ಗೆ ಅಭಿರುಚಿ ಇರುವವರು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಂತಾಗಬೇಕು ಎಂದರು.


ಬರಹಗಾರ್ತಿ ಐಚಂಡ ರಶ್ಮಿ ಮಾತನಾಡಿ, ಸಮಾಜದಲ್ಲಿ ನಡೆಯುವ ಕೆಲವು ಘಟನಾವಳಿಗಳನ್ನು ತಮ್ಮ ಚಿಂತನೆಗೆ ಒಳಪಡಿಸಿ ಹೇಗೆ ಸಾಮಾಜಿಕ ಬದಲಾವಣೆ ಮಾಡಬೇಕು ಎಂಬುವುದನ್ನು ಸಾಹಿತಿಗಳು ಪುಸ್ತಕದ ಮೂಲಕ ಹೊರತರುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಎಂದರು.


ಕೊಡವ ಮಕ್ಕಡ ಕೂಟದ ಪ್ರಧಾನ ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ ಮಾತನಾಡಿ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರತಿಬಿಂಬವಾಗಿರುವ ಪುಸ್ತಕಗಳು ಹಾಗೂ ಸಿನಿಮಾಗಳು ದಾಖಲೆಗಳಿದ್ದಂತೆ. ಇದು ಮುಂದಿನ ಯುವ ಪಿಳೀಗೆಗೆ ಸಹಕಾರಿಯಾಗಲಿದೆ ಎಂದರು.


ಕಾರ್ಯಕ್ರಮದಲ್ಲಿ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಹಾಗೂ ಖಜಾಂಚಿ ಅಮ್ಮಾಟಂಡ ಮೇದಪ್ಪ ಉಪಸ್ಥಿತರಿದ್ದರು.