ಜಿಲ್ಲೆ

ಭದ್ರಾಹಿನ್ನೀರಿಗೆ 21ಲಕ್ಷ ಮೀನು ಮರಿಗಳ ಬಿಡುಗಡೆ

ಎನ್.ಆರ್.ಪುರ: ಮೀನುಗಾರರಿಗೆ ಅನುಕೂಲ ಕಲ್ಪಿಸಲು ಲಿಂಗಾಪುರ, ರಾವೂರು ಮೀನು ಕ್ಯಾಂಪ್, ಮೆಣಸೂರು, ಮಾರಿದಿಬ್ಬ ಭದ್ರಾ ಹಿನ್ನೀರು ಹಾಗೂ ಹೊನ್ನೇ ಕೊಡಿಗೆ ಹೊಸ ಸೇತುವೆ ಸಮೀಪ ಭದ್ರಾಹಿನ್ನೀರಿಗೆ ಮೊದಲ ಕಂತಿನಲ್ಲಿ 21ಲಕ್ಷ ಮೀನು ಮರಿಗಳನ್ನು ಬಿಡಲಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ರಾವೂರು ಮೀನುಕ್ಯಾಂಪ್, ಲಿಂಗಾಪುರ, ಮೆಣಸೂರು, ಮಾರಿದಿಬ್ಬ, ಹೊನ್ನೇಕೊಡಿಗೆ ಹೊಸ ಸೇತುವೆ ಸಮೀಪದ ಭದ್ರಾ ಹಿನ್ನೀರಿಗೆ ಮೀನುಗಳನ್ನು ಬಿಟ್ಟ ನಂತರ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಾರಿ ಮೀನುಗಾರಿಕೆ ಸಚಿವ ಮಂಕಾಳ.ಎಸ್.ವೈದ್ಯರಿಗೆ ಮನವಿ ಮಾಡಿದ್ದರಿಂದ ಅತಿ ಹೆಚ್ಚು 21ಲಕ್ಷ ಮೀನುಮರಿಗಳನ್ನು ನೀಡಿದ್ದಾರೆ. ಇದರಲ್ಲಿ ಕಾಟ್ಲಾ, ಗೌರಿ, ರವು ಜಾತಿಗೆ ಸೇರಿದ ಮೀನು ಮರಿಗಳನ್ನು ಬಿಡಲಾಗಿದೆ. ಮೀನುಗಾರರು ಈ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಆರ್ಥಿಕವಾಗಿ ಮೇಲೆ ಬರಬೇಕು ಎಂದು ಕರೆ ನೀಡಿದರು.

ಅಕಾಲಿಕ ಮಳೆ ಹಿನ್ನಲೆಯಲ್ಲಿ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಮಳೆ ನಿಂತು ರಸ್ತೆ ಒಣಗಿದ ನಂತರ ಮತ್ತೆ ರಸ್ತೆ ಗುಂಡಿ ಮುಚ್ಚುವ ಕೆಲಸ ಪ್ರಾರಂಭಿಸಲಾಗುತ್ತದೆ. ರಸ್ತೆ ಬದಿಯ ಜಂಗಲ್ ಕ್ಲಿಯರ್ ಮುಂದುವರಿಸಲಾಗುವುದು. ಪಪಂ ಸದಸ್ಯರ ಬೇಡಿಕೆಯಂತೆ ಮಳೆ ನಿಂತ ಕೂಡಲೇ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಪಟ್ಟಣ ರಸ್ತೆಯನ್ನು ದುರಸ್ತಿ ಪಡಿಸಲಾಗುವುದು ಎಂದರು.

ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಸಹನ ದಾಸ್, ಜಿಪಂ ಮಾಜಿ ಸದಸ್ಯ ಪಿ.ಆರ್.ಸದಾಶಿವ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷೆ ಬಿಳಾಲುಮನೆ ಉಪೇಂದ್ರ, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್.ಎಲ್.ಶೆಟ್ಟಿ, ಗ್ರಾಪಂ ಸದಸ್ಯರಾದ ಸುನೀಲ್‌ಕುಮಾರ್, ಬಿನು, ಮಂಜು, ಕಾಂಗ್ರೆಸ್ ಮುಖಂಡರಾದ ಬಿ.ಎಸ್.ಸುಬ್ರಮಣ್ಯ, ಶಿವಣ್ಣ, ಎಂ.ಆರ್.ರವಿಶಂಕರ್ ಮತ್ತಿತರರು ಇದ್ದರು.