ಮಳವಳ್ಳಿ: ಸಾರ್ವಜನಿಕರ ಹಕ್ಕುಗಳಲ್ಲಿ ವಿದ್ಯುತ್ ಪೂರೈಕೆಯೂ ಒಂದಾಗಿರುವುದರಿಂದ ನಿಯಮಗಳನ್ನು ಸಡಿಲಿಸಿ ಹೊಸ ಸಂಪರ್ಕಪಡೆಯುವ ಗ್ರಾಹಕರಿಗೆ ಅನುಕೂಲ ಮಾಡಿಕೊಡಬೇಕೆಂದು ವಿದ್ಯುತ್ ಗುತ್ತಿಗೆದಾರರು ಸೆಸ್ಕ್ ಅಧಿಕಾರಿಗಳಲ್ಲಿ ಮನವಿ ಮಾಡಿದರು.
ಸೆಸ್ಕ್ ನಗರ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರೇಮ್ ಕುಮಾರ್ ಅಧ್ಯಕ್ಷತೆ ಪಟ್ಟಣದ ಉಪವಿಭಾಗದ ಸೆಸ್ಕ್ ಕಚೇರಿ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಗ್ರಾಹಕರ ಕುಂದು ಕೊರತೆ ಸಭೆಯಲ್ಲಿ ಗುತ್ತಿಗೆದಾರರು ತಮ್ಮ ಅಹವಾಲುಗಳನ್ನು ವಿವರಿಸಿದರು.
ಪ್ರತಿಯೊಂದು ಅನುಮೋದನೆಯನ್ನು ಆನ್‌ಲೈನ್ ಮೂಲಕ ಪಡೆಯಬೇಕೆಂದು ಹೇಳುತ್ತೀರಿ. ಆದರೆ ಗ್ರಾಮೀಣ ಪ್ರದೇಶದಲ್ಲಿ ಬಡವರು ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯಲು ಪೂರಕ ದಾಖಲೆಗಳನ್ನು ಒದಗಿಸಲಾಗದೇ ಪರದಾಡುತ್ತಾರೆ. ಇಂತಹವರಿಗೆ ನಿಯಮ ಪಾಲನೆ ಕಷ್ಟಸಾಧ್ಯವಾಗುತ್ತದೆ. ಇದರಿಂದ ಇವರಿಗೆ ವಿದ್ಯುತ್ ಸಂಪರ್ಕ ಪಡೆಯಲಾಗದಿದ್ದರೆ ಮಾನವೀಯ ಹಕ್ಕುಗಳಿಂದ ವಂಚಿತರಾಗುತ್ತಾರೆ ಎಂದರು.
ಆದ್ದರಿಂದ ಬಡವರು ವಿದ್ಯುತ್ ಸಂಪರ್ಕ ಪಡೆದುಕೊಳ್ಳಲು ಕೆಲವೊಂದು ನಿಯಮಗಳನ್ನು ಸಡಿಲಗೊಳಿಸುವಂತೆ ಮನವಿ ಮಾಡಿದರು. ಇಲ್ಲಿನ ಕಚೇರಿಯ ಸಿಬ್ಬಂದಿ ಗ್ರಾಹಕರು ಆರ್.ಆರ್. ಸಂಖ್ಯೆ ವರ್ಗಾವಣೆ ಮತ್ತು ರದ್ದು ಪಡಿಸಿಕೊಳ್ಳಲು ಸೇರಿದಂತೆ ಸಣ್ಣಪುಟ್ಟ ದಾಖಲೆ ತಿದ್ದುಪಡಿಗೂ 500 ರೂ. ಒಪ್ಪಿಗೆ ಪತ್ರ ಮಾಡಿಸಿಕೊಡಿ ಎನ್ನುತ್ತಾರೆ. ಇದನ್ನು ಸಿದ್ಧಪಡಿಸಿಕೊಡಲು 1 ಸಾವಿರ ರೂ. ವೆಚ್ಚ ಬರುತ್ತದೆ. ಇದರಿಂದ ಬಡ, ಮಧ್ಯಮ ವರ್ಗದ ಜನರಿಗೆ ತೊಂದರೆಯಾಗುತ್ತಿದೆ. 100 ರೂ. ಪತ್ರ ಸಾಕೆಂಬ ನಿಯಮವಿದ್ದರೂ ವಿನಾಕಾರಣ ಗ್ರಾಹಕರಿಗೆ ತಪ್ಪು ಮಾಹಿತಿ ನೀಡದಂತೆ ಸೂಚಿಸಬೇಕೆಂದು ಒತ್ತಾಯಿಸಿದರು. ಹೆಸರಿಗಷ್ಟೇ ಗ್ರಾಹಕ ಕುಂದುಕೊರತೆ ಸಭೆಯಾಗಿತ್ತಾದರೂ ಸಭೆ ಒಬ್ಬ ಗ್ರಾಹಕ ಮಾತ್ರ ಆಗಮಿಸಿ ಸಮಸ್ಯೆ ಹೇಳಿಕೊಂಡರು. ಉಳಿದಂತೆ ಗುತ್ತಿಗೆದಾರರ ಸಮಸ್ಯೆಗಳನ್ನು ಅಧಿಕಾರಿಗಳು ಆಲಿಸಿದರು.
ಗ್ರಾಹಕರಿಗೆ ತೊಂದರೆಯಾಗದಂತೆ ನೀವು ಹೇಳಿರುವ ಮಾಹಿತಿಗಳನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ನಿಯಮಾನುಸಾರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ವಹಿಸಲಾಗುವುದೆಂದು ಭರವಸೆ ನೀಡಿದರು. ಗ್ರಾಮಾಂತರ ಎಇಇ ನಿತೇಶ್, ತಾಂತ್ರಿಕ ವಿಭಾಗದ ಅಧಿಕಾರಿಗಳಾದ ರಾಜೇಶ್ವರಿ, ಶಿವಕುಮಾರ್ ಇದ್ದರು.