ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟ ತಪ್ಪಲಿನ ಇಂಡಿಗನತ್ತ ಗ್ರಾಮದಲ್ಲಿ ಗುರುವಾರ ಅನಾರೋಗ್ಯಕ್ಕೆ ಒಳಗಾದ 80 ವರ್ಷದ ವೃದ್ಧೆಯನ್ನು ಸಂಬಂಧಿಕರು ಡೋಲಿಯ ಮೂಲಕ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಮ.ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡಸಲನತ್ತ ಗ್ರಾಮದ ದುಂಡಮ್ಮ ಅವರು ಇಂಡಿಗನತ್ತ ಗ್ರಾಮದಲ್ಲಿರುವ ಹಿರಿಯ ಪುತ್ರ ಮಾದೇಗೌಡ ಅವರ ಮನೆಯಲ್ಲಿ ವಾಸವಿದ್ದರು. ಕಳೆದ 2 ದಿನಗಳ ಹಿಂದೆ ಆರೋಗ್ಯದಲ್ಲಿ ಏರುಪೇರಾಗಿತ್ತು. ಆದರೆ ಚಿಕಿತ್ಸೆ ಕೊಡಿಸಬೇಕಾದರೆ ಸುಮಾರು 10 ಕಿ.ಮೀ. ದೂರವಿರುವ ಮ.ಬೆಟ್ಟದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಬೇಕಿತ್ತು. ಆದರೆ ವಾಹನ ಸೌಕರ್ಯವಿಲ್ಲದ ಪರಿಣಾಮ ಸಂಬಂಧಿಕರು ದುಂಡಮ್ಮನನ್ನು ಮನೆಯಲ್ಲಿ ಇರಿಸಿಕೊಳ್ಳುವಂತಾಗಿತ್ತು.
ಗುರುವಾರ ಬೆಳಗ್ಗೆ ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆ ಮಾದೇಗೌಡ ಸಂಬಂಧಿಕರ ಜತೆಗೂಡಿ ಡೋಲಿಯ ಮೂಲಕ ದುಂಡಮ್ಮನನ್ನು ಕೂರಿಸಿಕೊಂಡು ಅರಣ್ಯ ಪ್ರದೇಶದ ದಾರಿಯಲ್ಲಿ ಮ.ಬೆಟ್ಟಕ್ಕೆ ತೆರಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡ ಬಳಿಕ ಪಡಸಲನತ್ತ ಗ್ರಾಮದಲ್ಲಿ ವಾಸವಿರುವ ಕಿರಿಯ ಪುತ್ರ ಪುಟ್ಟಸ್ವಾಮಿಗೌಡ ಅವರ ಮನೆಗೆ ಕರೆತರಲಾಗಿದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ.
ಕಳೆದ ಹಲವು ದಶಕದಿಂದಲೂ ವಾಸವಿರುವ ಈ ಭಾಗಕ್ಕೆ ಸಮರ್ಪಕ ಆರೋಗ್ಯ ಸೇವೆ ದೊರಕುತ್ತಿಲ್ಲ. ಅನಾರೋಗ್ಯಕ್ಕೆ ಒಳಗಾದರೆ ರೋಗಿಯನ್ನು ಡೋಲಿಯ ಮೂಲಕ ಆಸ್ಪತ್ರೆಗೆ ಕರೆದೊಯ್ಯಬೇಕಾದ ಪರಿಸ್ಥಿತಿ ಇದೆ. ಈ ಬಗ್ಗೆ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ತಿಳಿದಿದ್ದರೂ ಸಮರ್ಪಕ ಆರೋಗ್ಯ ಸೇವೆ ಒದಗಿಸುವಲ್ಲಿ ಕಾಳಜಿ ವಹಿಸುತ್ತಿಲ್ಲ. ಇದರಿಂದ ತುರ್ತು ಚಿಕಿತ್ಸೆ ಪಡೆಯಬೇಕಾದರೆ ಪಡಬಾರದ ಕಷ್ಟ ಪಡುತ್ತಿದ್ದೇವೆ. ಆದ್ದರಿಂದ ಈ ಭಾಗಕ್ಕೆ ಉತ್ತಮ ಆರೋಗ್ಯ ಸೇವೆ ಒದಗಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.