ಅಳವಂಡಿ ಸಮೀಪದ ಹೈದರನಗರದಲ್ಲಿ ಲಂಬಾಣಿ ಮಹಿಳೆಯರು ಕಾಡಿಗೆ ತೆರಳಿ ಹೂ ಸಂಗ್ರಹಿಸುತ್ತಿರುವುದು.  
ಜಿಲ್ಲೆ

ಸಂಬಂಧಗಳನ್ನು ಬೆಸೆಯುವ ಹಬ್ಬ

ರುದ್ರಪ್ಪ ವಾಲಿ
ಅಳವಂಡಿ: ಸಮೀಪದ ಹೈದರನಗರ ಗ್ರಾಮದಲ್ಲಿ ಲಂಬಾಣಿ ಮಹಿಳೆಯರು, ಯುವತಿಯರು ತಮ್ಮ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿ ಹಾಡುತ್ತಾ, ನೃತ್ಯ ಮಾಡುತ್ತಾ ಸಂಭ್ರಮದಿಂದ ದೀಪಾವಳಿ ಹಬ್ಬ ಬುಧವಾರ ಆಚರಿಸಿದರು. ಮನೆಯಲ್ಲಿ ಲಕ್ಷ್ಮೀಯನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಾರೆ. ಪಾಡ್ಯದಂದು ಪ್ರತಿ ಕುಟುಂಬದವರು ಸಗಣಿಯಿಂದ ಬೂದನನ್ನು ತಯಾರಿಸಿ ಪೂಜಿಸುತ್ತಾರೆ ಜತೆಗೆ ಅವಿವಾಹಿತ ಯುವತಿಯರು ಗುಂಪಾಗಿ ಕಾಡಿಗೆ ತೆರಳಿ ಹೂಗಳನ್ನು ಸಂಗ್ರಹಿಸಿ ತಂದು ಗೋದನ ಪೂಜೆ ನೆರವೇರಿಸುತ್ತಾರೆ. ಯುವತಿಯರು ಮನೆ ಮನೆಗೆ ತೆರಳಿ, ಕಾಡಿನಲ್ಲಿ ಸಂಗ್ರಹಿಸಿದ ಹೂಗಳನ್ನು ದನದ ಕೊಟ್ಟಿಗೆಯಲ್ಲಿ ಸಗಣಿಯಿಂದ ಸಿದ್ಧಪಡಿಸಿದ ಕುಪ್ಪಿಗಳಿಗೆ ಅಲಂಕರಿಸಿ ಗೊಮೂತ್ರ ಸಿಂಪಡಿಸಿ ಗೋವರ್ಧನ ಪೂಜೆ ಸಲ್ಲಿಸುತ್ತಾರೆ. ಈ ಹಬ್ಬದಂದು ಮದುವೆ ನಿಶ್ಚಯವಾದ ಯುವತಿಯರು ತನ್ನ ಸ್ನೇಹಿತೆಯರನ್ನು ತಬ್ಬಿಕೊಂಡು ಅಳುವುದು ಸಂಪ್ರದಾಯವಾಗಿದೆ. ತಾನು ಹುಟ್ಟಿ ಬೆಳೆದ ವಾತಾವರಣ, ಸಂಸ್ಕೃತಿ, ಗೆಳತಿಯರು, ತಂದೆ ತಾಯಿಯಂದಿರು ಸ್ನೇಹಿತರನ್ನು ಬಿಟ್ಟು ಹೋಗುವ ವಿಚಾರವಾಗಿ ತಬ್ಬಿಕೊಂಡು ದುಃಖ ವ್ಯಕ್ತಪಡಿಸುತ್ತಾರೆ ಎಂದು ಗ್ರಾಮದ ಹಿರಿಯರ ಅಭಿಪ್ರಾಯವಾಗಿದೆ. ಗ್ರಾಮಸ್ಥರು ಒಗ್ಗಟ್ಟಿನಿಂದ ದೀಪಾವಳಿ ಆಚರಿಸುವುದರಿಂದ ಎಲ್ಲರಲ್ಲೂ ಒಗ್ಗಟ್ಟಿನ ಭಾವನೆ ಬೆಳೆಯುತ್ತದೆ. ಹಿಂದಿನ ಕಾಲದ ಪದ್ಧತಿಯಂತೆ ಹಬ್ಬದ ಆಚರಣೆ ಮಾಡುವುದರಿಂದ ಮನಸ್ಸಿಗೆ ಖುಷಿಯಾಗುತ್ತದೆ ಮತ್ತು ಪರಂಪರೆ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಎಂಬ ಖುಷಿ ಇದೆ. ವಿರೂಪಾಕ್ಷಿ ಬಡಿಗೇರ ಗ್ರಾಮಸ್ಥ ಹೈದರನಗರ