ಜಿಲ್ಲೆ

ಪವರ್ ಬಿ.ಐ. ಔದ್ಯೋಗಿಕ ಕ್ಷೇತ್ರದ ಆಶಾಕಿರಣ

ಮಂಜುನಾಥ ಗದಗಿನ

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ಸಣ್ಣ ಸ್ಟಾರ್ಟಪ್‌ಗಳಿಂದ ಹಿಡಿದು ದೊಡ್ಡ ಗಾತ್ರದ ಉದ್ಯಮಗಳ ವ್ಯವಹಾರಗಳನ್ನು ಸಮರ್ಥವಾಗಿ ನಿರ್ವಹಿಸುವ ಪವರ್ ಬಿ.ಐ. ಔದ್ಯೋಗಿಕ ಕ್ಷೇತ್ರದ ಆಶಾಕಿರಣವಾಗಿದೆ ಎಂದು ದತ್ತಾಂಶ ಕಂಪನಿಯ ಅಧಿಕಾರಿ ರೇಖಾ ಗುರವ್ವಗೋಳ ಅಭಿಮತ ವ್ಯಕ್ತಪಡಿಸಿದರು.

ನಗರದ ಎಸ್.ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮೂರು ದಿನಗಳ ಕಾಲ ಈಚೆಗೆ ಆಯೋಜಿಸಿದ್ದ ಡೇಟಾ ಅನಾಲಿಟಿಕ್ಸ್ ಮತ್ತು ಪವರ್ ಬಿ.ಐ. ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.

ವಿದ್ಯಾರ್ಥಿಗಳು ಇಂಜಿನಿಯರಿಂಗ್ ಪದವಿಯ ನಂತರ ಪವರ್ ಬಿಐ ಅಧ್ಯಯನ ಮಾಡಲು ಅಂತಾರಾಜ್ಯ ಹಾಗೂ ವಿದೇಶಗಳಿಗೆ ತೆರಳುವ ಬದಲು ತಂತ್ರಜ್ಞಾನ ಬಳಸಿ ಪದವಿ ಹಂತದಲ್ಲಿಯೇ ಪವರ್ ಬಿಐ ಅಧ್ಯಯನ ಮಾಡಿದರೆ ಭವಿಷ್ಯದಲ್ಲಿ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಪಡೆಯಲು ಸಹಕಾರಿಯಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಆರ್.ಪಟಗುಂದಿ ಮಾತನಾಡಿ, ಸ್ಥಳೀಯವಾಗಿ ಉದ್ಯೋಗಾವಕಾಶ ಹೆಚ್ಚಿಸಲು ಕಾಲೇಜಿನಿಂದ ವಿವಿಧ ತರಬೇತಿ ಕಾರ್ಯಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ತ್ವರಿತವಾಗಿ ಬೆಳೆಯುತ್ತಿರುವ ಉದ್ಯೋಗ ಕ್ಷೇತ್ರದಲ್ಲಿ ಡೇಟಾ ಅನಾಲಿಟಿಕ್ಸ್ ಮತ್ತು ಪವರ್ ಬಿಐ ಪಾತ್ರವು ಮಹತ್ವ ಪಡೆದಿದೆ. ಎಲ್ಲರೂ ಆಸಕ್ತಿಯಿಂದ ಈ ಆಧುನಿಕ ತಂತ್ರಜ್ಞಾನವನ್ನು ಕಲಿಯಬೇಕು ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಪವರ್ ಬಿ.ಐ. ಡೆಸ್ಕ್‌ಟಾಪ್, ಡ್ಯಾಕ್ಸ್ ಫಂಕ್ಷನ್‌ಗಳು, ಡೇಟಾ ಮಾಡೆಲಿಂಗ್, ರಿಪೋರ್ಟ್ ವಿಸುಲೈಸೇಶನ್, ಇಂಟರಾಕ್ಟಿವ್, ಡ್ಯಾಶ್‌ಬೋರ್ಡ್ ಮುಂತಾದ ವಿಷಯಗಳ ಕುರಿತು ತರಬೇತಿ ನೀಡಲಾಯಿತು.

ವಿದ್ಯಾರ್ಥಿಗಳಿಗೆ ಸ್ವತಂತ್ರ ಪ್ರಾಜೆಕ್ಟ್ ನೀಡಿ ಅತ್ಯುತ್ತಮ ಯೋಜನೆಗಳನ್ನು ಆಯ್ಕೆ ಮಾಡಿ ಬಹುಮಾನ ನೀಡಿ ಗೌರವಿಸಲಾಯಿತು. ಪ್ರಾಧ್ಯಾಪಕರಾದ ಅನಿತಾ ಪಾಟೀಲ, ಸುಜಯ ಗೆಜ್ಜಿ, ಪ್ರತೀಕ ಬಡಗವಿ ಉಪಸ್ಥಿತರಿದ್ದರು. ಪ್ರಾಧ್ಯಾಪಕ ಡಾ. ಶಂಕರಗೌಡ ಪಾಟೀಲ ಸ್ವಾಗತಿಸಿದರು. ಅನಿತಾ ಪಾಟೀಲ ವಂದಿಸಿದರು.