ಮೂಡಿಗೆರೆಯಲ್ಲಿ ಕೆಂಪೇಗೌಡ ಒಕ್ಕಲಿಗರ ವೇದಿಕೆ ಮುಖಂಡರು ಪಂಜು ಹಿಡಿದು ಪ್ರತಿಭಟಿಸಿದರು. ಬ್ರಿಜೇಶ್ ಕಡಿದಾಳು, ಪ್ರಸಾದ್ ಬಕ್ಕಿ, ಡಿ.ಕೆ.ಲಕ್ಷ್ಮಣ್ ಗೌಡ, ಸುಧೀರ್ ಕಡಿದಾಳು ಇತರರಿದ್ದರು. 
ಜಿಲ್ಲೆ

ಸೌಜನ್ಯಾಳ ಕೊಲೆ ಪ್ರಕರಣ ಮರು ತನಿಖೆ ನಡೆಸಿ

ಎಸ್.ಎನ್.ರವೀಂದ್ರ

ಮೂಡಿಗೆರೆ: ಧರ್ಮಸ್ಥಳದ ಸೌಜನ್ಯಾ ಹತ್ಯೆ ಪ್ರಕರಣವನ್ನು ಸರ್ಕಾರ ಉನ್ನತಮಟ್ಟದ ತನಿಖೆಗೆ ಒಪ್ಪಿಸಬೇಕು. ಆರೋಪಿ ಎಷ್ಟೇ ಪ್ರಭಾವಿಯಾಗಿದ್ದರೂ ಬಂಧಿಸಬೇಕೆಂದು ಒತ್ತಾಯಿಸಿ ಶುಕ್ರವಾರ ರಾತ್ರಿ ಕೆಂಪೇಗೌಡ ಒಕ್ಕಲಿಗರ ವೇದಿಕೆಯಿಂದ ಪಟ್ಟಣದಲ್ಲಿ ಪಂಜಿನ ಮೆರವಣಿಗೆ ನಡೆಸಿ ಲಯನ್ಸ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಎಸ್‌ಐ ವೆಂಕಟೇಶ್‌ಮೂರ್ತಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಕೆಂಪೇಗೌಡ ಒಕ್ಕಲಿಗರ ವೇದಿಕೆ ತಾಲೂಕು ಅಧ್ಯಕ್ಷ ಬ್ರಿಜೇಶ್ ಕಡಿದಾಳು ಮಾತನಾಡಿ, 11 ವರ್ಷದ ಹಿಂದೆ ವಿದ್ಯಾರ್ಥಿನಿ ಸೌಜನ್ಯಾಳ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಿದ ಪ್ರಕರಣ ಸರಿಯಾಗಿ ತನಿಖೆ ಮಾಡದೆ ಮುಚ್ಚಿ ಹಾಕಲಾಗಿದೆ. ಕಣ್ಣೊರೆಸುವ ತಂತ್ರಕ್ಕಾಗಿ ಸಂತೋಷ ರಾವ್ ಎಂಬ ಅಮಾಯಕನನ್ನು ಬಂಧಿಸಿ 11 ವರ್ಷ ಜೈಲಿನಲ್ಲಿ ಇರಿಸಲಾಗಿತ್ತು. ನ್ಯಾಯಾಲಯ ಅವರನ್ನು ನಿರ್ದೋಷಿ ಎಂದು ಖುಲಾಸೆಗೊಳಿಸಿದೆ. ಹಾಗಾದರೆ ನಿಜವಾದ ಅತ್ಯಾಚಾರಿ ಯಾರು ಎಂಬುದು ಪತ್ತೆಯಾಗಬೇಕು ಎಂದು ಒತ್ತಾಯಿಸಿದರು.
ಕೊಲೆಗಾರನನ್ನು ಬಂಧಿಸಬೇಕು ಎಂದು ಒತ್ತಾಯಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಎಸ್‌ಐಟಿ ತಂಡ ರಚಿಸುವಂತೆ ವ್ಯಾಪಕವಾಗಿ ಒತ್ತಾಯ ಕೇಳಿ ಬಂದಿದೆ. ಈ ಹಿಂದೆ ಸಿಬಿಐ ಸೇರಿದಂತೆ ಅನೇಕ ಉನ್ನತ ಮಟ್ಟದ ತನಿಖೆ ನಡೆದರೂ ಹಂತಕನನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ತನಿಖಾಧಿಕಾರಿಗಳು ಹಂತಕನನ್ನು ರಕ್ಷಿಸಿದ್ದಾರೆ. ಸರ್ಕಾರ ಮರು ತನಿಖೆ ನಡೆಸಿ ಪ್ರಕರಣವನ್ನು ಬಯಲಿಗೆಳೆಯಬೇಕೆಂದು ಆಗ್ರಹಿಸಿದರು.
ಒಕ್ಕಲಿಗರ ವೇದಿಕೆ ಮುಖಂಡ ಬಿ.ಕೆ.ಲಕ್ಷ್ಮಣ್ ಗೌಡ ಮಾತನಾಡಿ, ಸಿಬಿಐ ತನಿಖೆಯಲ್ಲಿ ಹಂತಕನನ್ನು ಪತ್ತೆಹಚ್ಚಲು ಸಾಧ್ಯವಾಗದ ರೀತಿಯಲ್ಲಿ ಸಾಕ್ಷಿ ನಾಶಪಡಿಸಲಾಗಿದೆ. ತನಿಖೆಯ ದಿಕ್ಕು ತಪ್ಪಿಸಲು ದೊಡ್ಡ ಮಟ್ಟದಲ್ಲಿ ಸಂಚು ನಡೆದಿತ್ತು. ನೈಜ ಹಂತಕನನ್ನು ಪತ್ತೆಹಚ್ಚುವುದು ಸರ್ಕಾರಕ್ಕೆ ಕಷ್ಟವೇನಲ್ಲ. ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಮರುತನಿಖೆ ನಡೆಸಿ ಶಿಕ್ಷೆಗೆ ಗುರಿಪಡಿಸಬೇಕು ಎಂದರು.
ಪಪಂ ಸದಸ್ಯ ಪಿ.ಜಿ.ಅನುಕುಮಾರ್, ಚಿನ್ನಿಗ ಗ್ರಾಪಂ ಮಾಜಿ ಅಧ್ಯಕ್ಷ ಸುನಿಲ್, ಮುಖಂಡರಾದ ಬಿ.ಸಿ.ದಯಾಕರ್, ಪ್ರಸಾದ್ ಬಕ್ಕಿ, ಸುಧೀರ್ ಕಡಿದಾಳು, ಸುರೇಂದ್ರ, ಸಂದೇಶ್, ಮುಕುಂದ, ಪವನ್ ಇತರರಿದ್ದರು.