ಜಿಲ್ಲೆ

ಪ್ರತಿಯೊಬ್ಬರೂ ಸಂವಿಧಾನ ಅರಿಯಿರಿ

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಮಾನವೀಯ ಮೌಲ್ಯ, ಗೌರವ ಮತ್ತು ಸಮಾನ ಅವಕಾಶ ನೀಡಿದೆ. ಸಂವಿಧಾನ ಕೇವಲ ದಾಖಲೆ ಮಾತ್ರವಲ್ಲ, ಇದು ಸಮಾಜದ ಮೂಲ ಮಂತ್ರವಾಗಿದೆ. ಇದು ಕಾನೂನು ಒಪ್ಪಂದವಲ್ಲ, ಸಾಮಾಜಿಕ ಪಠ್ಯವಾಗಿದೆ ಎಂದು ಭಾರತದ ಸರ್ವೋಚ್ಚ ನ್ಯಾಯಾಲಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಳೆ ಹೇಳಿದರು.

ಕೆಎಲ್‌ಇ ಸಂಸ್ಥೆಯ ಬೆಳಗಾವಿಯ ಬಿ.ವಿ. ಬೆಲ್ಲದ ಕಾನೂನು ಕಾಲೇಜು ಜೆಎನ್‌ಎಂಸಿ, ಡಾ.ಕೊಡ್ಕಣಿ ಸಭಾಂಗಣದಲ್ಲಿ ‘ಭಾರತ ಸಂವಿಧಾನಕ್ಕೆ 75 ವರ್ಷ: ಸಂವಿಧಾನಿಕತೆಯ ಪುನರ್ ಆವಿಷ್ಕಾರ’ ಎಂಬ ವಿಷಯದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿ, ಸಂವಿಧಾನವು ಮಹಿಳೆಯರ ಹಕ್ಕುಗಳನ್ನು ರಕ್ಷಿಸುತ್ತಿದೆ. ಸುಪ್ರೀಂಕೋರ್ಟ್ ಮಹಿಳೆಯರ ಗೌರವ ಮತ್ತು ಹಕ್ಕುಗಳ ರಕ್ಷಣೆಗೆ ನಿಂತಿದೆ. ಇಂತಹ ಸಂವಿಧಾನವನ್ನು ನಾವೆಲ್ಲರೂ ತಿಳಿದುಕೊಳ್ಳಬೇಕು. ಎಲ್ಲರ ಹಕ್ಕುಗಳನ್ನು ಹಿತರಕ್ಷಿಸುವುದು ಅದರ ಮೂಲಧ್ಯೇಯವಾಗಿದೆ. ಭಾರತ ಸಂವಿಧಾನದ ಕಲಂ 21ನ್ನು ಉಲ್ಲೇಖಿಸಿ, ಗೌರವದೊಂದಿಗೆ ಬದುಕುವ ಹಕ್ಕು, ಗೌಪ್ಯತಾ ಹಕ್ಕು ಮುಂತಾದ ಉದಾಹರಣೆಗಳ ಮೂಲಕ ಇದರ ಪ್ರಗತಿ ವಿವರಿಸಿದರು.

ಕರ್ನಾಟಕ ಉಚ್ಚ ನ್ಯಾಯಾಲಯ ನ್ಯಾಯಮೂರ್ತಿ ವಿಜಯಕುಮಾರ ಪಾಟೀಲ ಮಾತನಾಡಿ, ತೀರ್ಪುಗಳಲ್ಲಿ ಮಾನವೀಯ ಸ್ಪರ್ಶವಿದೆ. ಇತ್ತೀಚಿನ ತೀರ್ಪಿನಲ್ಲಿ ಹೊಸ ಜೀವನ ಶೈಲಿಯಿಂದ ಉಂಟಾಗುತ್ತಿರುವ ಉದಾಸೀನತೆ ಮತ್ತು ಮನೋವೈಕಲ್ಯಗಳೆ ಹೆಚ್ಚು ಕಂಡು ಬರುತ್ತಿದೆ ಎಂದರು.

ನಿಟೆ ಎಜ್ಯುಕೇಶನ್ ಟ್ರಸ್ಟ್ ಉಪಾಧ್ಯಕ್ಷ ಡಾ.ಸಂದೀಪ ಶಾಸ್ತ್ರಿ, ‘ಆಟಿಟ್ಯೂಡ್, ಆಸ್ಪಿರೇಷನ್ ಮತ್ತು ಅಪ್ರೋಚ್’ ಮೂರು ಪದಗಳ ಅರ್ಥ ವಿವರಿಸಿ, ಇದು ವಿಕಸಿತ ಭಾರತಕ್ಕಾಗಿ ಅಗತ್ಯವಿರುವ ಶಕ್ತಿ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಡಾ. ವಿಶ್ವನಾಥ ಪಾಟೀಲ ಮಾತನಾಡಿ, ಈ ಸುವರ್ಣ ಜಯಂತಿ ಆಚರಣೆಯ ಸಂದರ್ಭಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಸಮಾವೇಶ ವಿದ್ಯಾರ್ಥಿಗಳಲ್ಲಿ ಸಂಶೋಧನೆ ಹಾಗೂ ಪ್ರಸ್ತುತ ಸಾಮರ್ಥ್ಯ ವೃದ್ಧಿಸಿ, ವಕಾಲತ್ತು ನಿರ್ವಹಿಸುವಲ್ಲಿ ಯಶಸ್ವಿಯಾಗಲು ಅಗತ್ಯ ಕೌಶಲಗಳನ್ನು ನೀಡುವುದರೊಂದಿಗೆ ಈ ಸಮಾವೇಶ ಸಫಲವಾಗಿದೆ ಎಂದರು.

ಸ್ನೇಹಾ ದೊಡ್ಮಣಿ ಮತ್ತು ತಂಡದವರು ಪ್ರಾರ್ಥಿಸಿದರು. ಕೆಎಲ್‌ಇ ತಾಂತ್ರಿಕ ವಿವಿ ಕಾನೂನು ಭಾಗದ ಡೀನ್ ಡಾ.ಜೆ.ಎಂ. ಮಲ್ಲಿಕಾರ್ಜುನಯ್ಯ ಸ್ವಾಗತಿಸಿದರು. ಪ್ರಾಚಾರ್ಯೆ ಡಾ.ಜ್ಯೋತಿ ಹಿರೇಮಠ ಪರಿಚಯಿಸಿದರು. ಪ್ರೇರಣಾ ಹನುಮಶೇಠ ನಿರೂಪಿಸಿದರು. ಸಂಯೋಜಕಿ ಡಾ.ಸುಪ್ರಿಯಾ ಸ್ವಾಮಿ ವಂದಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಕೇರಳ ಕೊಟ್ಟಾಯಂ ಮಹಾತ್ಮಾ ಗಾಂಧಿ ವಿವಿಯ ಪ್ರೊ.ಕೆ.ವಿಕ್ರಮನ್ ನಾಯರ, ಬೆಂಗಳೂರು ಕೆಎಲ್‌ಇ ಕಾನೂನು ಕಾಲೇಜು ಪ್ರೊ.ಸಿ.ರಾಜಶೇಖರ ಆಗಮಿಸಿದ್ದರು. ಸಮಾರೋಪದಲ್ಲಿ ಅತಿಥಿಯಾಗಿ ಪ್ರೊ.ಕೆ.ಆರ್. ಐತಾಳ ಭಾಗವಹಿಸಿ, ಪ್ರಬಂಧ ಮಂಡಿಸಿದ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಹಾಗೂ ನಗದು ಬಹುಮಾನ ವಿತರಿಸಿದರು. ಪ್ರೊ.ಸಿ. ರಾಜಶೇಖರ ಉಪಸ್ಥಿತರಿದ್ದರು. ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಆರ್.ಬಿ. ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ದೇಶದ ವಿವಿಧ ಕಾನೂನು ಕಾಲೇಜುಗಳಿಂದ 20 ಅಧ್ಯಾಪಕರು ಹಾಗೂ 150 ವಿದ್ಯಾರ್ಥಿಗಳು, ಸಿಬ್ಬಂದಿ ಭಾಗವಹಿಸಿದ್ದರು.