ವೆಂಕಟರಾಜು ಎಸ್. ದೊಡ್ಡಬಳ್ಳಾಪುರ
ಅಂಗವಿಕಲ ಮಕ್ಕಳಿಗೆ ವಿವಿಧ ರೀತಿಯ ಥೆರಪಿಗಳನ್ನು ನೀಡಲು ಅನುಕೂಲವಾಗುವಂತೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಎಜಾಕ್ಸ್ ಕಂಪನಿಯ ಸಿಎಸ್ಆರ್ ಅನುದಾನದಲ್ಲಿ 1 ಕೋಟಿ ರೂಪಾಯಿ ವೆಚ್ಚದಲ್ಲಿ ಶಿಕ್ಷಣ ಇಲಾಖೆಯಡಿ ಎಸ್ಎಸ್ಕೆ ವಿಕಲಚೇತನರ ಬೆಳವಣಿಗೆ ಪುನರ್ವಸತಿ ಕೇಂದ್ರ ಆರಂಭಿಸಲಾಗಿದ್ದು, ಸಾಕಷ್ಟು ಮಕ್ಕಳಿಗೆ ವರದಾನವಾಗಿದೆ. ಜಿಲ್ಲೆಯಲ್ಲಿ 15 ಸಾವಿರಕ್ಕೂ ಹೆಚ್ಚು ಅಂಗವಿಕಲರಿದ್ದು, ಈ ಪೈಕಿ ಸಾವಿರಾರು ಸಂಖ್ಯೆಯಲ್ಲಿ ಮಕ್ಕಳೂ ಇದ್ದಾರೆ. ಮಾತಿನ ಸಮಸ್ಯೆ ಇರುವ 1 ರಿಂದ 14 ವರ್ಷದವರೆಗಿನ ಮಕ್ಕಳಿಗೆ ಅಗತ್ಯವಾದ ಥೆರಪಿಗಳ ಸೌಲಭ್ಯ ಇಲ್ಲಿ ದೊರೆಯುತ್ತಿದೆ. ಪುನರ್ವಸತಿ ಕೇಂದ್ರದಲ್ಲಿ ಸದ್ಯಕ್ಕೆ 60 ಮಕ್ಕಳ ದಾಖಲಾತಿ ಇದ್ದು, ಶಿಕ್ಷಣ ಇಲಾಖೆಯು ಐವರು ಸಿಬ್ಬಂದಿಯನ್ನು ನೇಮಕ ಮಾಡಿದೆ. ಖಾಸಗಿಯಲ್ಲಿ ಥೆರಪಿ ಮಾಡಿದರೆ ಸಾವಿರಾರು ರೂಪಾಯಿಗಳ ಖರ್ಚು ಬರುತ್ತದೆ. ಇದರಿಂದ ಪಾಲಕರಿಗೆ ಸಾಕಷ್ಟು ಆರ್ಥಿಕ ಹೊರೆಯಾಗುತ್ತಿತ್ತು. ಈಗ ಸಿಎಸ್ಆರ್ ಅನುದಾನದಲ್ಲಿ ನಿರ್ಮಿಸಿದ ಕೇಂದ್ರದಲ್ಲಿ ಎನ್ಜಿಒ ಮೂಲಕ ಉಚಿತವಾಗಿ ಸೌಲಭ್ಯ ನೀಡಲಾಗುತ್ತಿದೆ. ಜತೆಗೆ ವಿವಿಧ ರೀತಿಯ ನೆರವನ್ನು ಕೂಡ ಈ ಕೇಂದ್ರ ನೀಡುತ್ತಿದೆ.
ಕೌಶಲ್ಯ ತರಬೇತಿ, ಸಲಕರಣೆ ವಿತರಣೆ : ಅಂಗವಿಕಲ ಮಕ್ಕಳಿಗೆ ಅವರ ದಿನನಿತ್ಯ ಜೀವನಕ್ಕೆ ಅಗತ್ಯವಾದ ಕೌಶಲಗಳನ್ನು ಕಲಿಸುವ ಅಗತ್ಯತೆಯಿದೆ. ಇದಕ್ಕಾಗಿ ಈ ಪುನರ್ವಸತಿ ಕೇಂದ್ರದಲ್ಲಿ ಮಕ್ಕಳಿಗೆ ಅಗತ್ಯವಾದ ವಿವಿಧ ಕೌಶಲ ಕಲಿಸಲಾಗುತ್ತಿದೆ. ಜತೆಗೆ ಥೆರಪಿ ಪಡೆಯುವ ಮಕ್ಕಳಿಗೆ ಹೆಚ್ಚಿನ ಶಸಚಿಕಿತ್ಸೆಯ ಅಗತ್ಯತೆ ಬಂದಲ್ಲಿ ಅವರಿಗೆ ಸಂಸ್ಥೆಯ ವತಿಯಿಂದ ಉಚಿತವಾಗಿ ಶಸಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಇದಲ್ಲದೆ ಇಲ್ಲಿನ ಮಕ್ಕಳಿಗೆ ವೀಲ್ಚೇರ್, ಸ್ಟಿಕ್ ಸೇರಿ ಇನ್ನಿತರ ಸಲಕರಣೆಗಳನ್ನು ಕೂಡ ಉಚಿತವಾಗಿ ನೀಡಲಾಗುತ್ತಿದೆ. 60 ಮಕ್ಕಳು ಈ ಸೌಲಭ್ಯ ಪಡೆಯುತ್ತಿದ್ದು, ಹೆಚ್ಚಿನ ಮಕ್ಕಳಿಗೆ ಸೌಲಭ್ಯ ನೀಡಲು ಸಂಸ್ಥೆ ಪ್ರಯತ್ನಿಸುತ್ತಿದೆ, ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಮಕ್ಕಳಿಗಾಗಿ ಈ ಸೌಲಭ್ಯ ಬಳಸಿಕೊಳ್ಳಬಹುದಾಗಿದೆ.
1 ಕೋಟಿ ರೂಪಾಯಿ ಅನುದಾನದಲ್ಲಿ ಕೇಂದ್ರ : ನಗರದ ವಿದ್ಯಾನಗರದಲ್ಲಿ ಎಜಾಕ್ಸ್ ಕಂಪನಿಯಿಂದ 60 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಈ ಕೇಂದ್ರದಲ್ಲಿ ಸಭಾಂಗಣ, ಆಟದ ಮೈದಾನ, ಥೆರಪಿ ಕೊಠಡಿ, ಶೌಚಗೃಹ ಕೂಡ ಇದೆ. ಜತೆಗೆ ಸ್ಪೀಚ್ ಥೆರಪಿ, ದೈಹಿಕ ಥೆರಪಿ ಸೇರಿ ವಿವಿಧ ರೀತಿಯ ಥೆರಪಿಗಳಿಗೆ ಅನುಕೂಲವಾಗುವಂತಹ ಸಲಕರಣೆಯನ್ನು ಒಟ್ಟು 1 ಕೋಟಿ ರೂ. ವೆಚ್ಚದಲ್ಲಿ ಈ ರೂಪಿಸಲಾಗಿದೆ. ಈಗಾಗಲೇ 60 ಮಕ್ಕಳು ಈ ಸೌಲಭ್ಯ ಪಡೆಯುತ್ತಿದ್ದು, ಮತ್ತಷ್ಟು ಮಕ್ಕಳು ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಸಿಎಸ್ಆರ್ ಅನುದಾನ 1 ಕೋಟಿ ವೆಚ್ಚದಲ್ಲಿ ಎಸ್ಎಸ್ಕೆ ವಿಕಲಚೇತನರ ಬೆಳವಣಿಗೆ ಪುನರ್ವಸತಿ ಕೇಂದ್ರ ಆರಂಭಿಸಲಾಗಿದೆ. ವಿವಿಧ ಥೆರಪಿ ಸೌಲಭ್ಯ ದೊರೆಯುತ್ತಿದ್ದು, ಸೌಲಭ್ಯ ಬಳಸಿಕೊಳ್ಳಬಹುದು. > ಮಂಜುನಾಥ್ ಸಿಎಸ್ಆರ್ ಅಧಿಕಾರಿ, ಎಜಾಕ್ಸ್ ಕಂಪನಿ ದೊಡ್ಡಬಳ್ಳಾಪುರ