ಸದೇಶ್ ಕಾರ್ಮಾಡ್ ಮೈಸೂರು
ಬೀದಿ ನಾಯಿಗಳ ಹಾವಳಿ ತಡೆಗಟ್ಟಲು ಹಾಗೂ ಅವುಗಳ ಆರೈಕೆಗೆ ನಗರದ ರಾಯನಕೆರೆಯಲ್ಲಿ ೩.೨೦ ಎಕರೆ ಜಾಗದಲ್ಲಿ ೨ ಕೋಟಿ ರೂ. ವೆಚ್ಚದಲ್ಲಿ ಬೀದಿ ನಾಯಿಗಳ ಪುನರ್ವಸತಿ ಕೇಂದ್ರ ತಲೆ ಎತ್ತುತ್ತಿದೆ.
ನಗರದಲ್ಲಿ ವರ್ಷದಿಂದ ವರ್ಷಕ್ಕೆ ಬೀದಿ ನಾಯಿಗಳ ಸಂಖ್ಯೆ ಹೆಚ್ಚುತ್ತಲೇ ಇತ್ತು. ಇದರಿಂದ ಸಾರ್ವಜನಿಕರು ಸಾಕಷ್ಟು ಸಮಸ್ಯೆ ಎದು ರಿಸಲು ಪ್ರಾರಂಭಿಸಿದರು. ವಿಶೇಷವಾಗಿ ರಾತ್ರಿ ವೇಳೆ ನಗರದಲ್ಲಿ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಲವು ನಾಯಿಗಳು ಆಕ್ರಮಣಕಾರಿ ಸ್ವಭಾವವನ್ನು ಹೊಂದಿದ್ದು, ಬೈಕ್, ಕಾರುಗಳನ್ನು ಬೆನ್ನಟ್ಟುವ ಸ್ವಭಾವ ಹೊಂದಿವೆ. ನಾಯಿಗಳು ಅಟ್ಟಿಸಿಕೊಂ ಡು ಬಂದ ಸಂದರ್ಭ ಹಲವಾರು ಬಾರಿ ಅಪಘಾತಗಳು ಸಂಭವಿಸಿವೆ. ನಾಯಿಗಳ ದಾಳಿಗೆ ಮಕ್ಕಳು ಹಾಗೂ ವಯೋವೃದ್ಧರು ಹೆಚ್ಚಾಗಿ ಗುರಿಯಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ನಗರದಲ್ಲಿ ಶ್ವಾನಗಳ ಸಂತತಿ ಕಡಿಮೆ ಮಾಡುವ ಉದ್ದೇಶದಿಂದ ನಗರ ಪಾಲಿಕೆಯು ೨೦೦೯ರಲ್ಲಿ ಬೀದಿನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಪ್ರಾರಂಭಿಸಿತು. ಈ ಹಿನ್ನೆಲೆಯಲ್ಲಿ ನಗರದಲ್ಲಿ ಇದೀಗ ನಾಯಿಗಳ ಸಂಖ್ಯೆ ಇಳಿಮುಖಗೊಂಡಿದೆ. ದಶಕದ ಹಿಂದೆ ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆ ೪೪ ಸಾವಿರ ಇತ್ತು. ಆದರೆ, ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಪ್ರಾರಂಭಿಸಿದ ಬಳಿಕ ನಾಯಿಗಳ ಸಂಖ್ಯೆ ಇದೀಗ ೮ ರಿಂದ ೯ ಸಾವಿರಕ್ಕೆ ಇಳಿಕೆಯಾಗಿದೆ. ಮುಂದಿನ ಕೆಲವು ವರ್ಷಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿತ ಕಾಣುವ ನಿರೀಕ್ಷೆಯನ್ನು ಹೊಂದಲಾಗಿದೆ.
ಪ್ರಸ್ತುತ ಬೀದಿ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆಯನ್ನು ಖಾಸಗಿ ಸಂಸ್ಥೆಗೆ ವಹಿಸಲಾಗಿದೆ. ರಾಯನಕೆರೆಯಲ್ಲಿ ಬೀದಿ ನಾಯಿಗಳ ಪುನರ್ವಸತಿ ಕೇಂದ್ರ ಕಾಮಗಾರಿ ಪೂರ್ಣಗೊಂಡರೆ ಆ ಕೇಂದ್ರದಲ್ಲಿಯೇ ಶ್ವಾನಗಳ ಸಂತಾನಶಕ್ತಿ ಹರಣ ಚಿಕಿತ್ಸೆ ಕಾರ್ಯ ನಡೆ ಯಲಿದೆ. ಅಲ್ಲದೆ, ಬೀದಿ ನಾಯಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಸಹ ಈ ಕೇಂದ್ರವನ್ನು ಬಳಕೆ ಮಾಡಲಾಗುವುದು.
ಬೀದಿ ನಾಯಿಗಳು ಅನಾರೋಗ್ಯಕ್ಕೀಡಾದರೆ ಅವುಗಳಿಗೆ ಸೂಕ್ತ ಚಿಕಿತ್ಸೆ, ಆರೈಕೆ ದೊರೆಯುವುದಿಲ್ಲ. ಪುನರ್ವಸತಿ ಕೇಂದ್ರ ಪ್ರಾರಂಭವಾದರೆ ಅನಾರೋಗ್ಯಕ್ಕೆ ಒಳಗಾಗುವ ಬೀದಿ ನಾಯಿಗಳನ್ನು ಗುರುತಿಸಿ ಅವುಗಳನ್ನು ಪುನರ್ವಸತಿ ಕೇಂದ್ರಕ್ಕೆ ತಂದು ಚಿಕಿತ್ಸೆ ನೀಡಿ ನಂತರ ಅವುಗಳನ್ನು ಸೆರೆ ಹಿಡಿದ ಜಾಗಕ್ಕೆ ತಂದು ಬಿಡಲಾಗುತ್ತದೆ. ದೀರ್ಘ ಕಾಲ ಕಾಯಿಲೆಯಿಂದ ಬಳಲುತ್ತಿದ್ದರೆ ಅಂತಹ ಬೀದಿ ನಾಯಿಗಳನ್ನು ಕೇಂದ್ರದಲ್ಲೇ ಇಟ್ಟು ಚಿಕಿತ್ಸೆ ನೀಡಲಾಗುತ್ತದೆ.
ಬೀದಿ ನಾಯಿಗಳ ಉಪಟಳ ತಾಳಲಾರದೆ ರಾಜ್ಯದ ವಿವಿಧೆಡೆ ಬೀದಿ ನಾಯಿಗಳನ್ನು ಕಾಡಿಗೆ ಬಿಟ್ಟ ಉದಾಹರಣೆಗಳು ಕೂಡ ಇವೆ. ಆದರೆ, ಬೀದಿ ನಾಯಿಗಳನ್ನು ಕಾಡಿಗೆ ಬಿಡುವುದಕ್ಕೆ ಕಾನೂನಿನ ತೊಡಕು ಇದೆ. ಬೀದಿ ನಾಯಿಗಳು ವನ್ಯಪ್ರಾಣಿಗಳಲ್ಲ, ಹಾಗಾಗಿ ಬೀದಿ ನಾಯಿಗಳನ್ನು ಅರಣ್ಯ ಪ್ರದೇಶಕ್ಕೆ ಬಿಟ್ಟರೆ ವನ್ಯಜೀವಿಗಳು ಸಮಸ್ಯೆ ಎದುರಿಸುತ್ತವೆ. ಅಲ್ಲದೆ ಬೀದಿ ನಾಯಿಗಳು ಮನುಷ್ಯನನ್ನು ಆಶ್ರಯಿಸಿ ಬದುಕುವ ಕಲೆಯನ್ನು ಮಾತ್ರ ಕಲಿತ್ತಿರುವ ಹಿನ್ನೆಲೆಯಲ್ಲಿ ಅವುಗಳು ಕಾಡಿನಲ್ಲಿ ಹಸಿವಿನಿಂದ ಸಾಯುವುದು ಅಥವಾ ಚಿರತೆ ಸೇರಿದಂತೆ ವಿವಿಧ ಕಾಡು ಪ್ರಾಣಿಗಳಿಗೆ ಆಹಾರವಾಗುವುದು ನಿಶ್ಚಿತ. ಬೀದಿ ನಾಯಿಗಳನ್ನು ಅರಣ್ಯ ಪ್ರದೇಶಕ್ಕೆ ಬಿಡಲು ಅವಕಾಶವಿಲ್ಲದ ಹಿನ್ನೆಲೆಯಲ್ಲಿ ಅವುಗಳಿಗೆ ಇರುವಲ್ಲಿಯೇ ಸೂಕ್ತ ವ್ಯವಸ್ಥೆ ಕಲ್ಪಿಸುವ ಅವಶ್ಯಕತೆ ಇದೆ. ಅದರ ಜತೆಗೆ ಅವುಗಳ ಸಂತತಿ ಹೆಚ್ಚಾಗದಂತೆ ನಿಗಾ ವಹಿಸಿದರೆ ಬೀದಿ ನಾಯಿಗಳಿಂದ ಜನರಿಗೆ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ. ಚೆನ್ನೈ, ಹೈದರಾಬಾದ್, ಮುಂಬೈ ಸೇರಿದಂತೆ ದೇಶದ ವಿವಿಧೆಡೆ ಬೀದಿ ನಾಯಿಗಳ ಪುನರ್ವಸತಿ ಕೇಂದ್ರಗಳು ಇದ್ದು, ಅದೇ ಮಾದರಿಯಲ್ಲಿ ಇದೀಗ ನಮ್ಮ ನಗರದಲ್ಲೂ ಪುನರ್ವಸತಿ ಕೇಂದ್ರವನ್ನು ನಿರ್ಮಾಣಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆ.
ನಗರದ ರಾಯನಕೆರೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಬೀದಿ ನಾಯಿಗಳ ಪುನರ್ವಸತಿ ಕೇಂದ್ರದ ಕಾಮಗಾರಿ ಒಂದೆರಡು ತಿಂಗಳ ಒಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಈ ಕೇಂದ್ರವನ್ನು ಶ್ವಾನಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಬಳಕೆ ಮಾಡಲಾಗುವುದು. ನಗರದ ಲ್ಲಿರುವ ಬೀದಿ ನಾಯಿಗಳನ್ನು ಸೆರೆ ಹಿಡಿದು ಪುನರ್ವಸತಿ ಕೇಂದ್ರದಲ್ಲಿ ಕೂಡಿ ಹಾಕಲು ಕಾನೂನ ತೊಡಕು ಇದೆ. ಹಾಗಾಗಿ ಈ ಕೇಂದ್ರವನ್ನು ಶ್ವಾನಗಳ ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಹಾಗೂ ಅವುಗಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಚಿಕಿತ್ಸೆ ನೀಡುವ ಕೇಂದ್ರವಾಗಿ ಬಳಕೆ ಮಾಡಲಾಗುವುದು.
ಲಕ್ಷ್ಮೀಕಾಂತ ರೆಡ್ಡಿ, ಆಯುಕ್ತ, ನಗರ ಪಾಲಿಕೆ
ಎಷ್ಟೋ ಬೀದಿ ನಾಯಿಗಳು ಆಹಾರವಿಲ್ಲದೆ, ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿವೆ. ಸಾಕಷ್ಟು ಬೀದಿನಾಯಿಗಳು ಅಪಘಾತಕ್ಕೆ ಒಳಗಾಗಿ ಸಮಸ್ಯೆ ಎದುರಿಸುತ್ತಿವೆ. ಹೀಗಾಗಿ ಬೀದಿನಾಯಿಗಳನ್ನು ಕಾಪಾಡುವ ಹಿತದೃಷ್ಟಿಯಿಂದ ಬೀದಿನಾಯಿಗಳ ಪುನರ್ವಸತಿ ಕೇಂದ್ರ ನಿರ್ಮಾಣ ಕೈಗೊಳ್ಳಲಾಗಿದೆ. ಕೇಂದ್ರದ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ೨ ಕೋಟಿ ರೂ. ನೀಡಲಾಗಿದೆ. ಅನಾರೋಗ್ಯ, ಅಪಘಾತಕ್ಕೆ ಒಳಗಾದ ಬೀದಿ ನಾಯಿಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುವುದು. ಅಲ್ಲದೆ ಬೀದಿ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಈ ಕೇಂದ್ರದಲ್ಲಿ ನಡೆಯಲಿದೆ.
ಎಸ್.ಎ. ರಾಮದಾಸ್, ಶಾಸಕ