ಜಿಲ್ಲೆ

ಮುಳುಗಡೆಗೆ ಒಳಪಡುವ ಗ್ರಾಮಗಳಿಗೆ ಪುನರ್ವಸತಿ ಕಲ್ಪಿಸಿ

ಮುಂಡರಗಿ: ಸಿಂಗಟಾಲೂರು ಏತ ನೀರಾವರಿ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಬೇಕು. ಹಿನ್ನೀರಿನ ಮುಳುಗಡೆ ಪ್ರದೇಶಕ್ಕೆ ಒಳಪಡುವ ಗ್ರಾಮಗಳಿಗೆ ಸಮರ್ಪಕ ಪುನರ್ವಸತಿ ಕಲ್ಪಿಸಬೇಕು.

ಗುಮ್ಮಗೋಳ ಗೋಣಿಬಸವೇಶ್ವರ ದೇವಸ್ಥಾನ, ಬಿದರಹಳ್ಳಿ ರೇಣುಕಾಂಬಾ ದೇವಸ್ಥಾನ ಸಂರಕ್ಷಣೆ ಮಾಡಬೇಕು ಎಂದು ಆಗ್ರಹಿಸಿ ಜು. 2ರಂದು ಸಚಿವ ಎಚ್.ಕೆ.ಪಾಟೀಲ ಅವರ ಸಮ್ಮುಖದಲ್ಲಿ ನಿಯೋಗದೊಂದಿಗೆ ತೆರಳಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದು ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್. ಗೌಡರ ಹೇಳಿದರು.


ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜ್ ಹಿನ್ನೀರಿನಿಂದ ಮುಳುಗಡೆಯಾದ ಗುಮ್ಮಗೋಳ, ಬಿದರಹಳ್ಳಿ, ವಿಠಲಾಪುರ ಗ್ರಾಮಗಳು ಸಂಪೂರ್ಣವಾಗಿ ಸ್ಥಳಾಂತರಗೊಳ್ಳದ ಕಾರಣ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ.

ಹೀಗಾಗಿ ಸರ್ಕಾರ ಮುಳುಗಡೆ ಪ್ರದೇಶದಲ್ಲಿ ಒಳಪಡುವ ಗ್ರಾಮಗಳ ಪುನರ್ವಸತಿಗಾಗಿ 100 ಕೋಟಿ ರೂ. ಮಂಜೂರು ಮಾಡಬೇಕು. ಗ್ರಾಮಗಳನ್ನು ಸ್ಥಳಾಂತರಿಸಿ ಸಮರ್ಪಕವಾಗಿ ಯೋಜನೆ ಜಾರಿಗೊಳಿಸಲು ಮುಂದಾಗಬೇಕು ಎಂದರು.


30 ವರ್ಷಗಳ ಹಿಂದೆ ಯೋಜನೆಗೆ ಅನುಮೋದನೆ ದೊರೆತಿದೆ. 2012ರಲ್ಲಿ ಬ್ಯಾರೇಜ್ ಲೋಕಾರ್ಪಣೆಗೊಂಡಿದೆ. ಆದರೆ, ಪುನರ್ವಸತಿ, ಸ್ಥಳಾಂತರ, ಪರಿಹಾರ ಇನ್ನುಳಿದ ಕೆಲಸಗಳು ವೇಗ ಪಡೆಯದೆ ಹಿನ್ನಡೆಯಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳ ಬೇಜಬ್ದಾರಿಯಿಂದ ಈ ರೀತಿಯಾಗಿದೆ ಎಂದರು.