ಜಿಲ್ಲೆ

ನಿರಂತರ ಯೋಗಾಭ್ಯಾಸದಿಂದ ಆರೋಗ್ಯ ಉತ್ತಮ

ಮುಂಡರಗಿ: ಆಧುನಿಕ ಒತ್ತಡದ ಜೀವನ ಪದ್ಧತಿಯಲ್ಲಿ ಮನುಷ್ಯನು ಯೋಗ, ವ್ಯಾಯಾಮದಂತ ದೈಹಿಕ ಚಟುವಟಿಕೆ ಕಡಿಮೆ ಮಾಡಿಕೊಂಡು ದೈಹಿಕ ಹಾಗೂ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿದ್ದಾನೆ. ಹೀಗಾಗಿ ಭಾರತೀಯ ಸಂಸ್ಕೃತಿಯ ಕೊಡುಗೆ ಆದ ಯೋಗಕ್ಕೆ ನಾವು ಮೊರೆ ಹೋಗಬೇಕು ಎಂದು ಭುವನೇಶ್ವರಿ ವಿದ್ಯಾವರ್ಧಕ ಸಂಸ್ಥೆಯ ಕಾರ್ಯಾಧ್ಯಕ್ಷ ಎ.ವೈ. ನವಲಗುಂದ ಹೇಳಿದರು.

ಪಟ್ಟಣದ ಜೆ.ಟಿ. ಕೋಟೆ ಪ್ರೌಢಶಾಲೆ ಆವರಣದಲ್ಲಿ ಅನ್ಮೋಲ್ ಯೋಗ ಹಾಗೂ ಆಯುರ್ವೆದ ಚಿಕಿತ್ಸಾ ಕೇಂದ್ರ ಮಂಗಳವಾರ ಹಮ್ಮಿಕೊಂಡಿದ್ದ ರಥಸಪ್ತಮಿಯ 108 ಸೂರ್ಯ ನಮಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಯೋಗ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಲು ಅತ್ಯಂತ ಉಪಯುಕ್ತ ಮಾರ್ಗವಾಗಿದೆ. ಪ್ರತಿದಿನ ನಿರಂತರವಾಗಿ ಯೋಗಾಭ್ಯಾಸ ಮಾಡುವ ಮೂಲಕ ಉತ್ತಮ ಆರೋಗ್ಯ ಕಂಡುಕೊಳ್ಳಬೇಕು. ಸಣ್ಣ ವಯಸ್ಸಿನಿಂದಲೇ ಮಕ್ಕಳಿಗೆ ಯೋಗದ ಬಗ್ಗೆ ಆಸಕ್ತಿಯನ್ನು ಮೂಡಿಸಬೇಕು ಎಂದರು.

ಅನ್ಮೋಲ್ ಯೋಗ ಕೇಂದ್ರದ ನಿರ್ದೇಶಕಿ ಡಾ.ಮಂಗಳಾ ಇಟಗಿ ಮಾತನಾಡಿ, ಭೂಮಂಡಲದ ಸಕಲ ಜೀವ ರಾಶಿಗಳಿಗೂ ಚೈತನ್ಯ ಶಕ್ತಿ ಆದಂತಹ ಸೂರ್ಯ ಸಕಲ ವ್ಯಾದಿಗಳನ್ನು ಗುಣಪಡಿಸುವಂತಹ ಶಕ್ತಿ ಹೊಂದಿದ್ದಾನೆ. ಆದ್ದರಿಂದ ಸೂರ್ಯೋಪಾಸನೆ ದಿನ ಅತ್ಯಂತ ಭಕ್ತಿ ಭಾವದಿಂದ ಕೃತಜ್ಞತಾಪೂರ್ವವಾಗಿ ಸೂರ್ಯ ನಮಸ್ಕಾರ ಹಾಕುವುದರ ಮುಖಾಂತರ ರಥಸಪ್ತಮಿ ಆಚರಿಸಲಾಗುತ್ತದೆ. ಸೂರ್ಯ ನಮಸ್ಕಾರವು ಸಂಪೂರ್ಣ ಸಾಧನ, ಆಧ್ಯಾತ್ಮಿಕ ಅಭ್ಯಾಸವಾಗಿದೆ. ಅದು ಆಸನ, ಪ್ರಾಣಾಯಾಮ, ಮಂತ್ರ ಮತ್ತು ಧ್ಯಾನ ತಂತ್ರಗಳನ್ನು ಒಳಗೊಂಡಿದೆ ಎಂದರು.

ಸಾಹಿತಿ ಡಾ.ನಿಂಗು ಸೊಲಗಿ ಮಾತನಾಡಿದರು. ಅನ್ಮೋಲ್ ಯೋಗ ಕೇಂದ್ರದ ಅಧ್ಯಕ್ಷ ಡಾ.ಚಂದ್ರಕಾಂತ ಇಟಗಿ ಅಧ್ಯಕ್ಷತೆ ವಹಿಸಿದ್ದರು. ಕರಬಸಪ್ಪ ಹಂಚಿನಾಳ, ಎಂ.ಪಿ. ಶೀರನಹಳ್ಳಿ, ರವೀಂದ್ರಗೌಡ ಪಾಟೀಲ, ತಾಂಬ್ರಗುಂಡಿ. ಬಸವರಾಜ ಯಲಶೆಟ್ಟಿ, ಶಾಂತಾ ಮಾಳಾಪುರ, ಲಕ್ಷ್ಮೀ ಉಪ್ಪಾರ, ವಾಸಂತಿ ಯಾಳಗಿ, ಕುಸುಮ ರತ್ನಕಟ್ಟಿ, ವಿಶಾಲಾಕ್ಷಿ ಗೊರವರ, ಸಹನ ಸಿದ್ಲಿಂಗ್, ಗೀತಾ ಪೂಜಾರ, ಜೈಬುನ್ನಿಸಾ ಬಿಸನಹಳ್ಳಿ ಉಪಸ್ಥಿತರಿದ್ದರು. ಅಶೋಕ ಹುಬ್ಬಳ್ಳಿ ಹಾಘೂ ಎಂ.ಟಿ. ಮಾಳಪೂರ ಕಾರ್ಯಕ್ರಮ ನಿರ್ವಹಿಸಿದರು.