ಜಮಖಂಡಿ: ರೋಗಕ್ಕೆ ಚಿಕಿತ್ಸೆ ಪಡೆಯಲು ಮಾತ್ರ ಆಸ್ಪತ್ರೆಗೆ ತೆರಳದೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರ ಸೂಚನೆ ಪಾಲಿಸಬೇಕು ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ತಿಳಿಸಿದರು.
ನಗರದ ಸಾನಿಯಾ ಮೆಡಿಕಲ್, ನ್ಯಾಮಗೌಡ ಪಾಲಿಕ್ಲಿನಿಕ್, ಬಿಎಲ್‌ಡಿಇ ನರ್ಸಿಂಗ್ ಕಾಲೇಜಿನ ಆಶ್ರಯದಲ್ಲಿ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಮತ್ತು ಔಷಧ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯ ಶಿಬಿರಗಳಿಂದ ಬಡವರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಆದ್ದರಿಂದ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಆಯೋಜಿಸಬೇಕು ಎಂದರು.
400ಕ್ಕೂ ಅಧಿಕ ರೋಗಿಗಳ ಆರೋಗ್ಯ ತಪಾಸಣೆಯನ್ನು ವೈದ್ಯರಾದ ಡಾ. ಶ್ರೀಶೈಲ ಅಂಜುಟಗಿ, ಡಾ. ವಿಶ್ವನಾಥ ಆಲಮೇಲ, ಡಾ. ಪವನ ಬಳ್ಳೂರ, ಡಾ. ಸಂಗಮೇಶ ನ್ಯಾಮಗೌಡ, ಡಾ.ಶಿವಲೀಲಾ ನ್ಯಾಮಗೌಡ ನಡೆಸಿದರು. ಸಾನಿಯಾ ಮೆಡಿಕಲ್ ವತಿಯಿಂದ ತಪಾಸಣೆಗೆ ಬಂದ ರೋಗಿಗಳಿಗೆ ಉಚಿತವಾಗಿ ಔಷಧಿ ವಿತರಿಸಲಾಯಿತು.
ನಗರಸಭೆ ಅಧ್ಯಕ್ಷ ಪರಮಾನಂದ ಗವರೋಜಿ, ಮೀರಾಸಾಬ ಒಂಟಮೂರಿ, ಮಲ್ಲು ಗಣಾಚಾರಿ, ಅಕ್ಬರ ಜಮಾದಾರ, ಅಯ್ಯೂಬ್‌ಧನ್ನೂರ ಮತ್ತಿತರರಿದ್ದರು.