ಕೊಳ್ಳೇಗಾಲದ ಎಂಜಿಎಸ್‌ವಿ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿದರು. ಮಹೇಶ್, ಮಂಜುಳಾ, ಸೋಮೇಗೌಡ, ಮಂಜುಳಾ, ಗಂಗಾಧರ್ ಇದ್ದರು. 
ಜಿಲ್ಲೆ

ಜಿಲ್ಲೆಯಲ್ಲಿ 5 ಲಕ್ಷಕ್ಕೂ ಹೆಚ್ಚು ಜನರ ನೋಂದಣಿ

ಕೊಳ್ಳೇಗಾಲ: ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮವನ್ನು ಶ್ರದ್ಧೆ ಹಾಗೂ ಗೌರವದಿಂದ ನಡೆಸಬೇಕು. ಆ ಮೂಲಕ ಸಂವಿಧಾನ ಉಳಿವಿಗೆ ಪ್ರತಿಯೊಬ್ಬ ಭಾರತೀಯ ನಿಲ್ಲಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಪಟ್ಟಣದ ಎಂಜಿಎಸ್‌ವಿ ಜೂನಿಯರ್ ಕಾಲೇಜು ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಂವಿಧಾನ ಉಳಿವಿಗಾಗಿ ಹಾಗೂ ಮುಂದಿನ ಪೀಳಿಗೆಗೆ ಸಂವಿಧಾನ ಅರಿವು ಮೂಡಿಸಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ‘ಸಂವಿಧಾನ ಓದು’ ಎಂಬ ಕಾರ್ಯಕ್ರಮ ಜಾರಿಗೆ ತಂದಿದೆ. ಈಗಾಗಲೇ ರಾಜ್ಯದಲ್ಲಿ 2 ಕೋಟಿ ಹಾಗೂ ಜಿಲ್ಲೆಯಲ್ಲಿ 5 ಲಕ್ಷಕ್ಕೂ ಹೆಚ್ಚು ಜನರು ನೋಂದಣಿ ಮಾಡಿಕೊಂಡಿದ್ದಾರೆ ಎಂದರು.
ಸ್ವಾತಂತ್ರ್ಯ ಪೂರ್ವ, ಬ್ರಿಟಿಷರ ಆಳ್ವಿಕೆಯ ಕಾಲಘಟ್ಟದಲ್ಲಿ ಮಹಿಳೆಯರಿಗೆ ಮತದಾನದ ಹಕ್ಕಿರಲಿಲ್ಲ. ನಮ್ಮ ರಾಜ್ಯದಲ್ಲಿ ಪದವೀಧರರು, ಜಮೀನ್ದಾರರು ಹಾಗೂ ಸರ್ಕಾರಕ್ಕೆ ಕಂದಾಯ ಕಟ್ಟುವರಿಗೆ ಮಾತ್ರ ಮತದಾನದ ಹಕ್ಕಿತ್ತು. ಆದರೆ ಭಾರತಕ್ಕೆ ಸ್ವಾತಂತ್ರ್ಯ ದೊರೆತು ಅಂಬೇಡ್ಕರ್ ರಚಿಸಿದ ಸಂವಿಧಾನ ಅಳವಡಿಸಿಕೊಂಡ ಬಳಿಕ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ಸಿಕ್ಕಿತು ಎಂದು ಹೇಳಿದರು.

ಪ್ರಸ್ತುತ ನಮಗೆ ಮತದಾನದ ಸಮಾನತೆ ದೊರೆತಿದೆ. ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ಸ್ವಾವಲಂಬಿಯಾಗಿ ಜೀವನ ನಡೆಸಲು ಸಂವಿಧಾನದಿಂದ ಅವಕಾಶ ನೀಡಿದೆ. ಆದ್ದರಿಂದ ಭಾರತೀಯರಾದ ನಾವು ಸಂವಿಧಾನದ ಬಗ್ಗೆ ಹೆಮ್ಮೆ ಪಡಬೇಕು. ಅಂಬೇಡ್ಕರ್ ಅವರನ್ನು ಗೌರವಿಸಬೇಕು ಎಂದು ಕಿವಿಮಾತು ಹೇಳಿದರು.

ಸಂವಿಧಾನ ಬದಲಾವಣೆ ಕೂಗು ಹಾಗಾಗೆ ಕೇಳಿ ಬರುತ್ತದೆ. ಈ ಹಿಂದೆ ಪಕ್ಷವೊಂದರ ಕೇಂದ್ರದ ಮಂತ್ರಿಯೊಬ್ಬರು ಸಂವಿಧಾನ ಬದಲಾವಣೆ ಮಾಡಲು ನಾವು ಅಧಿಕಾರಕ್ಕೆ ಬಂದಿರೋದು ಎಂಬ ಹೇಳಿಕೆ ನೀಡಿದ್ದರು. ನಾನು ಆಗ ಅದೇ ಪಕ್ಷದಲ್ಲಿದ್ದೆ. ಈ ಹೇಳಿಕೆ ಖಂಡಿಸಿ ಪಕ್ಷ ತೊರೆದೆ. ಇಂತಹ ಸನ್ನಿವೇಶಗಳು ನಮಗೆ ಎದುರಾದರೇ ಎದೆಗುಂದದೆ ತೀರ್ಮಾನ ಕೈಗೊಳ್ಳಬೇಕು ಎಂದು ತಿಳಿಸಿದರು.

ಉಪವಿಭಾಗಾಧಿಕಾರಿ ಮಹೇಶ್, ತಹಸೀಲ್ದಾರ್ ಮಂಜುಳಾ, ಡಿವೈಎಸ್ಪಿ ಸೋಮೇಗೌಡ, ಬಿಇಒ ಮಂಜುಳಾ, ಸಮಾಜ ಕಲ್ಯಾಣ ಇಲಾಖೆಯ ಸಹಾಯ ನಿರ್ದೇಶಕ ಗಂಗಾಧರ್, ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಹಾಗು ವಿವಿಧ ಶಾಲೆಯ ವಿದ್ಯಾರ್ಥಿಗಳು ಇದ್ದರು.