ಹೂವಿನಹಡಗಲಿ ತಾಲೂಕಿನ ಸೋವೆನಹಳ್ಳಿ ಗ್ರಾಪಂ ವ್ಯಾಪ್ತಿಯ ಕೆರೆಯಲ್ಲಿ ನಡೆಯುತ್ತಿರುವ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಮಂಗಳವಾರ ಆಯೋಜಿಸಿದ್ದ ದುಡಿಯೋಣ ಬಾ ಅಭಿಯಾನ ಮತ್ತು ಆರೋಗ್ಯ ತಪಾಸಣಾ ಶಿಬಿರವನ್ನು ತಾಪಂ ಇಒ ಉಮೇಶ ಮೈನಹಳ್ಳಿ ಉದ್ಘಾಟಿಸಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಪಾಲಾಕ್ಷಿ ಬಾಯಿ, ನರೇಗಾ ಸಹಾಯಕ ನಿರ್ದೇಶಕ ವೀರಣ್ಣ ನಾಯ್ಕ, ಪಿಡಿಒ ಪ್ರಕಾಶ ಪೂಜಾರ್ ಇತರರಿದ್ದರು. 
ಜಿಲ್ಲೆ

ಖಾತ್ರಿ ಯೋಜನೆಗೆ ಹೆಸರು ನೋಂದಾಯಿಸಿ

ರುದ್ರಪ್ಪ ವಾಲಿ

ಹೂವಿನಹಡಗಲಿ: ನರೇಗಾ ಯೋಜನೆಯಡಿ ಗ್ರಾಮೀಣ ಜನರಿಗೆ ನಿರಂತರ ಕೆಲಸ ಒದಗಿಸುವ ಉದ್ದೇಶದಿಂದ ದುಡಿಯೋಣ ಬಾ ಅಭಿಯಾನ ಹಮ್ಮಿಕೊಂಡಿದ್ದು, ಕೂಲಿಕಾರ್ಮಿಕರು ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ತಾಪಂ ಇಒ ಉಮೇಶ ಮೈನಹಳ್ಳಿ ಹೇಳಿದರು.

ತಾಲೂಕಿನ ಸೋವೆನಹಳ್ಳಿ ಗ್ರಾಪಂ ವ್ಯಾಪ್ತಿಯ ಕೆರೆಯಲ್ಲಿ ನಡೆಯುತ್ತಿರುವ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಮಂಗಳವಾರ ಆಯೋಜಿಸಿದ್ದ ದುಡಿಯೋಣ ಬಾ ಅಭಿಯಾನ ಮತ್ತು ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ನರೇಗಾ ಯೋಜನೆಯಲ್ಲಿ ದುರ್ಬಲ ಕುಟುಂಬಗಳನ್ನು ಗುರುತಿಸಿ ಅವರಿಗೆ 100 ದಿನ ಕೆಲಸ ಒದಗಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

18 ವರ್ಷ ಮೇಲ್ಪಟ್ಟವರು ಉದ್ಯೋಗ ಚೀಟಿ ಇಲ್ಲದಿದ್ದಲ್ಲಿ ಕೂಡಲೇ ಗ್ರಾಪಂಗಳಲ್ಲಿ ಹೆಸರು ನೋಂದಾಯಿಸಬೇಕು. ಈ ಯೋಜನೆಯಲ್ಲಿ ಒಳಗೊಳ್ಳದೆ ಇರುವ ಕುಟುಂಬಗಳನ್ನು ಸಮೀಕ್ಷೆ ಮಾಡಿ ಅರ್ಹರಿಗೆ ಉದ್ಯೋಗ ಚೀಟಿ ವಿತರಿಸಲಾಗುವುದು. ಸ್ವ-ಸಹಾಯ ಗುಂಪುಗಳ ಮಹಿಳೆಯರಲ್ಲಿ ಯೋಜನೆಯ ಕುರಿತು ಅರಿವು ಮೂಡಿಸಬೇಕು. ಅಂಗವಿಕಲ ವಯೋವೃದ್ಧರು, ಮಹಿಳೆಯರಿಗೆ ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ನೀಡಲಾಗಿದೆ.

ನರೇಗಾ ಕೆಲಸಕ್ಕೆ ಬರುವ ಕೂಲಿಕಾರರು ಕಡ್ಡಾಯವಾಗಿ ಎನ್‌ಎಂಆರ್ ಒಳಗಡೆ ಹೆಸರು ಹೊಂದಿರಬೇಕು. ಬೆಳಗ್ಗೆ ಮತ್ತು ನಂತರ ಎನ್‌ಎಂಎಂಎಸ್ ಹಾಜರಾತಿ ಕಡ್ಡಾಯವಾಗಿ ಹಾಕಬೇಕು ಎಂದರು.

ನರೇಗಾ ಸಹಾಯಕ ನಿರ್ದೇಶಕ ವೀರಣ್ಣನಾಯ್ಕ ಮಾತನಾಡಿ, ಬೇಸಿಗೆ ಸಂದರ್ಭದಲ್ಲಿ ಹೆಚ್ಚು ಬಿಸಿಲಿರುವುದರಿಂದ ಕೂಲಿ ಕಾರ್ಮಿಕರು ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು ಎಂದರು. ಪಿಡಿಒ ಪ್ರಕಾಶ ಪೂಜಾರ್, ವೈದ್ಯರಾದ ಕಿರಣ್, ಚಂದ್ರಶೇಖರ್ ನಾಯ್ಕ, ಗ್ರಾಪಂ ಸದಸ್ಯ ಪರಮೇಶ್ವರಪ್ಪ, ತಾಪಂ ಐಇಸಿ ಸಂಯೋಜಕ ಪ್ರಕಾಶ ನಾಯ್ಕ, ತಾಂತ್ರಿಕ ಸಂಯೋಜಕ ರವಿಕುಮಾರ್ ಇತರರಿದ್ದರು.