ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲೆಯ ಸರ್ಕಾರಿ, ಖಾಸಗಿ ಆರೋಗ್ಯ ಸಂಸ್ಥೆಗಳಲ್ಲಿ ಜರುಗುವ ಜನನ, ಮರಣ ಘಟನೆಗಳನ್ನು ಕಡ್ಡಾಯವಾಗಿ ಜನನ ಮರಣ ಅಧಿನಿಯಮದಡಿ 21 ದಿನಗಳ ನಿಗದಿತ ಅವಧಿಯೊಳಗೆ ನೋಂದಣಿ ಕಾರ್ಯ ಕೈಗೊಳ್ಳಬೇಕು. ತಡ ನೋಂದಣಿಗೆ ಅವಕಾಶ ನೀಡದೆ ಜನರಿಗೆ ಜನನ, ಮರಣದ ಮೊದಲ ಪ್ರತಿಯನ್ನು ಉಚಿತವಾಗಿ ನೀಡುವಂತೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರಿ, ಖಾಸಗಿ ಆರೋಗ್ಯ ಸಂಸ್ಥೆಗಳಲ್ಲಿ ಜರುಗುವ ಮರಣ ಘಟನೆಗಳಿಗೆ ಮರಣ ಕಾರಣ, ವೈದ್ಯಕಿಯ ಪ್ರಮಾಣ ಪತ್ರಗಳನ್ನು ಕಡ್ಡಾಯವಾಗಿ ಜನನ ಮರಣಗಳ ಮುಖ್ಯ ನೋಂದಣಾಧಿಕಾರಿಗೆ ನೇರವಾಗಿ ಸಲ್ಲಿಸಬೇಕು. ಯಾವುದೇ ಮರಣ ಘಟನೆ ಜರುಗದೇ ಇದ್ದಲ್ಲಿ ಶೂನ್ಯ ವರದಿ ಸಲ್ಲಿಸಬೇಕು. ಆರೋಗ್ಯ ಸಂಸ್ಥೆಗಳ ವೈದ್ಯಾಧಿಕಾರಿಗಳಿಗೆ ನಿಗದಿತ ಅವಧಿಯಲ್ಲಿ ಜನನ, ಮರಣಗಳ ವಿವರವನ್ನು ಆನ್ಲೈನ್ನಲ್ಲಿ ದಾಖಲಿಸಲು ತಿಳಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗೆ ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಜಿಪಂ ಉಪ ಕಾರ್ಯದರ್ಶಿ ಬಿ.ಎಸ್.ಮುಗನೂರಮಠ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶಶಿ ಪಾಟೀಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಡಾ. ಕುಕನೂರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಪಟ್ಟಣ ಪಂಚಾಯಿತಿ ಮತ್ತು ಪುರಸಭೆಗಳ ಮುಖ್ಯಾಧಿಕಾರಿಗಳು, ಇತರರು ಇದ್ದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ವಿ.ವೈ. ಪಾಟೀಲ ಸ್ವಾಗತಿಸಿದರು.