ಜಿಲ್ಲೆ

ಕ್ರೆಡಿಟ್ ಕಾರ್ಡ್‌ಗೆ ನೋಂದಾಯಿಸಿಕೊಳ್ಳಿ

Mandya

ಮಂಡ್ಯ: ಜಮೀನು ಹೊಂದಿರುವ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸಾಲದ ಸೌಲಭ್ಯ ಒದಗಿಸುತ್ತಿದ್ದು, ಅರ್ಹ ರೈತರು ಫೆ.24ರೊಳಗೆ ಕಾರ್ಡ್ ಪಡೆಯಲು ನೋಂದಣಿ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರು ಬೆಳೆಯುವ ಬೆಳೆಗಳಿಗೆ ಅನುಸಾರ ಬ್ಯಾಂಕುಗಳಲ್ಲಿ ಸಾಲ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈ ಹಿಂದೆ ಕೃಷಿ ಚಟುವಟಿಕೆಗೆಂದು ಚಿನ್ನಾಭರಣ ಅಡವಿಟ್ಟುಕೊಂಡು ಶೇ.7ರ ಬಡ್ಡಿ ದರದಲ್ಲಿ ಸಾಲ ವಿತರಿಸುತ್ತಿದ್ದು, ಇದರಲ್ಲಿ ಶೇ.3ರಷ್ಟು ಸಬ್ಸಿಡಿ ನೀಡಲಾಗುತ್ತಿತ್ತು. ಆದರೆ, ಇದು ದುರುಪಯೋಗವಾಗುತ್ತಿರುವುದು ಕಂಡುಬಂದಿತ್ತು. ಜತೆಗೆ ಚಿನ್ನಾಭರಣವಿಲ್ಲದವರಿಗೆ ಸಾಲ ಸಿಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಬೆಳೆಗಳಿಗೆ ಅನುಗುಣವಾಗಿ ಸಾಲ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಈವರೆಗೆ 2.14 ಲಕ್ಷ ರೈತರು ಕಿಸಾನ್ ಕಾರ್ಡ್ ಪಡೆದುಕೊಂಡಿದ್ದು, ಇನ್ನೂ 36 ಸಾವಿರ ರೈತರು ಕಾರ್ಡ್ ಪಡೆದುಕೊಳ್ಳಬೇಕಿದೆ ಎಂದು ವಿವರಿಸಿದರು.

ನೋಂದಣಿ ಮಾಡಿಸಿಕೊಳ್ಳಲು ಆರ್‌ಟಿಸಿ, ಆಧಾರ್ ಕಾರ್ಡ್, ಇಸಿ, ಬ್ಯಾಂಕ್ ಖಾತೆ ವಿವರವನ್ನು ತಮ್ಮ ಖಾತೆ ಹೊಂದಿರುವ ಬ್ಯಾಂಕ್ ನೀಡಬೇಕು. ಜಮೀನಿನ ಸರ್ವೆ ನಂಬರ್‌ನಲ್ಲಿ ಬೆಳೆದಿರುವ ಬೆಳೆಯನ್ನು ಆಧರಿಸಿ 14 ದಿನದೊಳಗೆ ಸಾಲ ನೀಡಲಾಗುತ್ತದೆ. 2020ರ ೆ. 24 ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪ್ರಥಮ ವಾರ್ಷಿಕ ದಿನವಾಗಿದ್ದು, ಈ ದಿನಾಂಕದೊಳಗೆ ದೇಶದಲ್ಲಿ ಒಂದು ಕೋಟಿ ರೈತರಿಗೆ ಹೊಸದಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆ ಮಾಡಲಾಗುತ್ತಿದೆ. ದೇಶದಲ್ಲಿ ಸುಮಾರು 9.22 ಕೋಟಿ ರೈತ ಕುಟುಂಬಗಳು ಈ ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದು, ಈವರೆಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಸುಮಾರು 6.76 ಕೋಟಿ ರೈತರು ಮಾತ್ರ ಸಾಲ ಪಡೆದುಕೊಂಡಿದ್ದಾರೆ. ಇನ್ನೂ 2.47 ಕೋಟಿ ರೈತರು ಸಾಲ ಪಡೆದಿರುವುದಿಲ್ಲ ಎಂದು ತಿಳಿಸಿದರು.

ಯಾವ ಬೆಳೆ ಎಷ್ಟು ಸಾಲ: ಯೋಜನೆಯಡಿ ಶೇ.7ರ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು. ಇದರಲ್ಲಿ ಶೇ.3ರಷ್ಟು ಸಬ್ಸಿಡಿ ನೀಡಲಾಗುತ್ತದೆ. ರೈತರು ಬೆಳೆಯುವ ಪ್ರತಿ ಎಕರೆ ಕಬ್ಬಿಗೆ 60 ಸಾವಿರ ರೂ, ಭತ್ತಕ್ಕೆ 50 ಸಾವಿರ ರೂ., ರಾಗಿಗೆ 30 ಸಾವಿರ ರೂ, ಟಮೋಟೋ ಬೆಳೆಗೆ 50 ಸಾವಿರ ರೂ., ಬಾಳೆ ಬೆಳೆಗೆ 50 ಸಾವಿರ ರೂ., ಪಪ್ಪಾಯಿ ಬೆಳೆಗೆ 50 ಸಾವಿರ ರೂ. ಸಾಲ ನೀಡಲಾಗುವುದು. ಅಲ್ಲದೆ, ಒಂದು ವೇಳೆ ಪ್ರಾಕೃತಿಕ ವಿಕೋಪದಿಂದ ಬೆಳೆ ನಷ್ಟವಾದಲ್ಲಿ ಕೇಂದ್ರ ಸರ್ಕಾರದಿಂದ ಪರಿಹಾರ ಧನ ಸಿಗಲಿದೆ ಎಂದು ವಿವರಿಸಿದರು.

ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಾಗಿ 3 ಸಾವಿರ ಕೋಟಿ ರೂ. ಸಾಲ ನೀಡುವ ಗುರಿ ಹೊಂದಲಾಗಿತ್ತು. ಈ ಪೈಕಿ ಕಳೆದ ವರ್ಷ 220 ಕೋಟಿ ರೂ. ಸಾಲ ನೀಡಲಾಗಿದೆ. ಇನ್ನು ಜಿಲ್ಲೆಯಲ್ಲಿ 5.60 ಲಕ್ಷದಷ್ಟು ಪೈಕಿ ಆರ್‌ಟಿಸಿಗಳಿವೆ. ಅದರಲ್ಲಿ 1.60 ಲಕ್ಷ ಪೈಕಿಗಳನ್ನು ಕ್ರೋಡೀಕರಣ ಮಾಡಲಾಗಿದೆ ಎಂದರು.

ಇನ್ನು ಜಿಲ್ಲೆಯ ಎಲ್ಲ ತಾಲೂಕಿನಲ್ಲಿಯೂ ಭತ್ತ ಖರೀದಿ ಕೇಂದ್ರ ತೆರೆದು ಭತ್ತ ಖರೀದಿ ಮಾಡಲಾಗುತ್ತಿದೆ. ಆದರೆ, ರೈತರಿಂದ ಆಕ್ಷೇಪಣೆಗಳು ಹೆಚ್ಚಾಗಿದೆ. ಈ ಪೈಕಿ ತಪ್ಪು ಆಕ್ಷೇಪಣೆಗಳು ಬರುತ್ತಿವೆ. ಕೆಲ ರೈತರು ತಮ್ಮ ಜಮೀನುಗಳಲ್ಲಿ ಭತ್ತವನ್ನೇ ಬೆಳೆದಿರುವುದಿಲ್ಲ. ಆದರೂ ಭತ್ತ ಖರೀದಿ ಮಾಡಿಕೊಳ್ಳುವಂತೆ ಆಕ್ಷೇಪಣೆ ಸಲ್ಲಿಸುತ್ತಿದ್ದಾರೆ ಎಂದರು.

ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕ ಎನ್.ಕದರಪ್ಪ, ನಬಾರ್ಡ್‌ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಟಿ.ಸುಧೀರ್ ಹಾಗೂ ವಿವಿಧ ಬ್ಯಾಂಕ್ ಅಧಿಕಾರಿಗಳು ಇದ್ದರು.