ಬಾಳೆಹೊನ್ನೂರು: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಆಯುಷ್ಮಾನ್ ಭಾರತ್ (ಆಭಾ) ಕಾರ್ಡ್‌ಗೆ ಪ್ರತಿಯೊಬ್ಬರೂ ಕಡ್ಡಾಯವಾಗಿ ನೋಂದಾಯಿಸಿಕೊಂಡು ಕಾರ್ಡ್‌ನ ಸೌಲಭ್ಯ ಉಪಯೋಗಿಸಿಕೊಳ್ಳುವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಪ್ರವೀಣ್ ತಿಳಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ನಡೆದ ಆರೋಗ್ಯ ರಕ್ಷಾ ಸಮಿತಿಯಲ್ಲಿ ಮಾತನಾಡಿ, ಸೆ.17ರಿಂದ ಅ.2ರವರೆಗೆ ಆಭಾ ಕಾರ್ಡ್ ನೋಂದಣಿ ಅಭಿಯಾನ ಆಯೋಜಿಸಲಾಗಿದೆ. ಕಾರ್ಡ್ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಬೇಕಿದೆ. ಈ ಹಿಂದೆ ಆಯುಷ್ಮಾನ್ ಕಾರ್ಡ್ ಎಂದು ನೋಂದಾಯಿಸಿಕೊಳ್ಳುತ್ತಿದ್ದು, ಇದೀಗ ಆ ಕಾರ್ಡ್‌ಗೆ ಮಾನ್ಯತೆ ಇಲ್ಲ. ಆಯುಷ್ಮಾನ್ ಭಾರತ್ ಕಾರ್ಡ್ ಅನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಾಗೂ ಆರೋಗ್ಯ ಕ್ಷೇಮ ಕೇಂದ್ರದಲ್ಲಿ ನೋಂದಣಿ ಮಾಡುತ್ತಿದ್ದು ಸಾರ್ವಜನಿಕರು ಬಿಪಿಎಲ್ ಕಾರ್ಡ್, ಆಧಾರ್ ಕಾರ್ಡ್ ನೀಡಿ ನೋಂದಾಯಿಸಿಕೊಳ್ಳಬಹುದು. ನಂತರ ಡಿಜಿಟಲ್ ಸೇವಾ ಕೇಂದ್ರದಲ್ಲಿ ಕಾರ್ಡ್ ಪ್ರಿಂಟ್ ಮಾಡಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.
ಆಭಾ ಕಾರ್ಡ್‌ನಲ್ಲಿ ಒಂದು ಕುಟುಂಬಕ್ಕೆ 5 ಲಕ್ಷ ರೂ.ವರೆಗೆ ಆರೋಗ್ಯ ವಿಮೆ ಸೌಲಭ್ಯದೊರೆಯಲಿದೆ. ಇತ್ತೀಚಿನ ಸರ್ವೇಗಳ ಪ್ರಕಾರ ಶೇ.60 ಜನ ಅಸಾಂಕ್ರಮಿಕ ರೋಗಗಳಿಂದ ಮೃತಪಡುತ್ತಿದ್ದಾರೆ. ಅವುಗಳ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ ಆರೋಗ್ಯ ಕ್ಷೇಮ ಕೇಂದ್ರ ಆರಂಭಿಸಿದೆ. ಬಿಪಿ, ಶುಗರ್ ಮುಂತಾದ ಕಾಯಿಲೆಗಳಿಗೆ ಕೇಂದ್ರದಲ್ಲಿ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಳೆಹೊನ್ನೂರು ಪಿಎಚ್‌ಸಿ ವ್ಯಾಪ್ತಿಯ ಬಂಡಿಹೊಳೆ, ಬನ್ನೂರು, ಮೇಲ್ಪಾಲ್‌ನಲ್ಲಿ ಕ್ಷೇಮ ಕೇಂದ್ರ ಆರಂಭಿಸಲಾಗಿದೆ ಎಂದು ತಿಳಿಸಿದರು.
ಬುಡಕಟ್ಟು ಜನಾಂಗದವರಲ್ಲಿ ರಕ್ತಹೀನತೆ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ರಕ್ತಹೀನತೆ ಹೆಚ್ಚಾದಲ್ಲಿ ಕ್ಷಯರೋಗಕ್ಕೆ ತಿರುಗುವ ಸಾಧ್ಯತೆಯಿದೆ. 2025ರ ವೇಳೆಗೆ ಕ್ಷಯಮುಕ್ತ ಭಾರತ ಮಾಡುವ ಗುರಿ ಹೊಂದಲಾಗಿದೆ. ರಕ್ತ ಪರೀಕ್ಷೆಯಲ್ಲಿಯೇ ಕ್ಷಯ ಪತ್ತೆಹಚ್ಚುವ ತಂತ್ರಜ್ಞಾನ ಬಂದಿದೆ ಎಂದರು.
ಗ್ರಾಪಂ ಅಧ್ಯಕ್ಷ ಸದಾಶಿವ ಆಚಾರ್ಯ ಮಾತನಾಡಿ, ಆಯುಷ್ಮಾನ್ ಭಾರತ್ ಕಾರ್ಡ್ ಕುರಿತು ಗ್ರಾಪಂ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಪ್ರಚಾರ ನಡೆಸಲಾಗುವುದು ಎಂದು ಹೇಳಿದರು.
ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಹಿರಿಯಣ್ಣ, ಶಾರದಮ್ಮ, ಗ್ರಾಪಂ ಸದಸ್ಯ ಇಬ್ರಾಹಿಂ ಶಾಫಿ, ಹಿರಿಯ ಆರೋಗ್ಯ ನಿರೀಕ್ಷಕ ಭಗವಾನ್, ಮಹಿಳಾ ಆರೋಗ್ಯ ಸುರಕ್ಷಣಾಧಿಕಾರಿ ವಿಜಯಲಕ್ಷ್ಮೀ ಇತರರಿದ್ದರು.