ಬೆಂಗಳೂರು: ಕಸ್ತೂರಿ ರಂಗನ್ ವರದಿಯಿಂದ (Kasturirangan Report) ಉಂಟಾಗಬಹುದಾದ ಪರಿಣಾಮಗಳ ಕುರಿತು ಸಮಗ್ರವಾಗಿ ಪರಿಶೀಲಿಸಿ, ವರದಿಯಲ್ಲಿರುವ ನ್ಯೂನತೆಗಳನ್ನು ಸರಿಪಡಿಸಿ ಸೂಕ್ತ ಮಾರ್ಪಾಡುಗಳನ್ನು ಮಾಡಲು ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚನೆಗೆ ಇದೀಗ ರಾಜ್ಯ ಸರ್ಕಾರ ಅಸ್ತು ಎಂದಿದೆ.
ಅರಣ್ಯ ಸಚಿವ ರಾಮಲಿಂಗಾರೆಡ್ಡಿ ವಿಧಾನ ಪರಿಷತ್ತಿನಲ್ಲಿ ಸರ್ಕಾರದ ಪರವಾಗಿ ಉತ್ತರಿಸಿದ್ದು, ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆಯ ಜತೆಗೆ ಅಲ್ಲಿನ ರೈತರು, ತೋಟಗಾರರು, ಆದಿವಾಸಿಗಳು ಹಾಗೂ ಸ್ಥಳೀಯರ ಹಕ್ಕು ಮತ್ತು ಜೀವನೋಪಾಯವನ್ನು ರಕ್ಷಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಹೇಳಿದರು.
ಉನ್ನತ ಮಟ್ಟದ ಸಮಿತಿಯಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು, ರೈತ ಸಮುದಾಯದ ಪ್ರತಿನಿಧಿಗಳು, ಕೈಗಾರಿಕಾ ವಲಯದ ಪ್ರತಿನಿಧಿಗಳು ಹಾಗೂ ಅರಣ್ಯ ಮತ್ತು ಪರಿಸರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಪರಿಣತಿ ಹೊಂದಿರುವ ಶೈಕ್ಷಣಿಕ ಸಂಸ್ಥೆಗಳ ತಜ್ಞರು ಮತ್ತು ವಿಜ್ಞಾನಿಗಳನ್ನು ಒಳಗೊಳ್ಳಲು ಉದ್ದೇಶಿಸಲಾಗಿದೆ.
ಕಸ್ತೂರಿ ರಂಗನ್ ವರದಿಯಲ್ಲಿರುವ ನ್ಯೂನತೆಗಳನ್ನು ಸ್ಥಳೀಯ ವಾಸ್ತವಾಂಶಗಳ ಆಧಾರದ ಮೇಲೆ ಪರಿಶೀಲಿಸಿ, ಅಗತ್ಯವಿರುವ ಮಾರ್ಪಾಡುಗಳನ್ನು ಗುರುತಿಸಿ, ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ಕ್ರಮ ಕೈಗೊಳ್ಳಲಾಗುವುದು. ಈ ಪ್ರಕ್ರಿಯೆ ಪೂರ್ಣಗೊಳಿಸಲು ಒಂದು ವರ್ಷದ ಕಾಲಾವಕಾಶ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ರಾಮಲಿಂಗಾರೆಡ್ಡಿ ಹೇಳಿದರು.
ರಾಜ್ಯ ಮಟ್ಟದಲ್ಲಿ ರಚಿಸಲಾಗುವ ಸಮಿತಿಗೆ ಅಗತ್ಯ ಮಾಹಿತಿ ಮತ್ತು ಸ್ಥಳೀಯ ವಾಸ್ತವಾಂಶಗಳನ್ನು ಒದಗಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಜನಪ್ರತಿನಿಧಿಗಳನ್ನು ಒಳಗೊಂಡ ಸಮಿತಿಗಳನ್ನು ರಚಿಸುವ ಉದ್ದೇಶವಿದೆ. ಕಸ್ತೂರಿ ರಂಗನ್ ವರದಿ ಆಧಾರಿತ ಕೇಂದ್ರದ ಏಳನೇ ಕರಡು ಅಧಿಸೂಚನೆ ಕುರಿತು ಸೆ.21ರಂದು ಚರ್ಚೆ ನಡೆದಿತ್ತು.