ಮಂಡ್ಯ: ನಗರದಲ್ಲಿ ನಿರಾಶ್ರಿತರು ಖಾಲಿ ಸ್ಥಳ ಮತ್ತು ಅಂಗಡಿ ಮುಂಗಟ್ಟು ಮುಂದೆ ಮಲಗುತ್ತಿರುವುದು ಕಂಡುಬಂದಿದೆ. ಈ ಹಿನ್ನಲೆಯಲ್ಲಿ ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಬೀದಿಬದಿ ಮಲಗುವುದನ್ನು ತಪ್ಪಿಸುವ ಹಾಗೂ ಆದೇಶ ಪಾಲನೆ ಮಾಡಲು ನಿರಾಶ್ರಿತರ ಕೇಂದ್ರ ತೆರೆಯಲು ತೀರ್ಮಾನಿಸಲಾಗಿದೆ ಎಂದು ಪೌರಾಯುಕ್ತ ಮಂಜುನಾಥ್ ಹೇಳಿದರು.
ನಗರದ ಸಂತೇಮಾಳದಲ್ಲಿ ನಗರಸಭೆ, ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ದೀನ್ ದಯಾಳ್ ಅಂತ್ಯೋದಯ ಯೋಜನೆ, ಮೈಸೂರಿನ ಕ್ರೆಡಿಟ್ ಐ ಸಂಸ್ಥೆಯಿಂದ ಮಂಗಳವಾರ ಆಯೋಜಿಸಿದ್ದ ವಿಶ್ವ ನಿರಾಶ್ರಿತರ ದಿನದಲ್ಲಿ ಮಾತನಾಡಿದರು. ಮಂಡ್ಯ ನಗರದಲ್ಲಿ 13 ರಿಂದ 14 ಜನ ನಿರಾಶ್ರಿತರಿದ್ದಾರೆ. ಇವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ತಿಳಿಸುವ ಕೆಲಸವನ್ನು ಮಾಡಲಾಗಿದೆ. ಅದರಂತೆ ಈ ಎಲ್ಲ ಸೌಲಭ್ಯವನ್ನು ನೀಡಲಾಗುವುದು ಎಂದು ತಿಳಿಸಿದರು.
ಕ್ರೆಡಿಟ್ ಸಂಸ್ಥೆಯ ಡಾ.ಎಂ.ಪಿ.ವರ್ಷ, ತುಳಸೀಧರ್, ಸಮುದಾಯ ಸಂಘಟನಾ ಅಧಿಕಾರಿ ಪ್ರದೀಪ್, ವ್ಯವಸ್ಥಾಪಕರಾದ ಕೇಶವ್, ಸಿದ್ದರಾಜು, ವಿಜಯಲಕ್ಷ್ಮೀ ಇತರರಿದ್ದರು.