ಜಿಲ್ಲೆ

ಮೌಲ್ಯವರ್ಧಿತ ಜೀವನಕ್ಕೆ ನಿರಾಶ್ರಿತರ ಕೇಂದ್ರ ಆಸರೆ

ಕೋಲಾರ ಡೆಸ್ಕ್

ಬಂಗಾರಪೇಟೆ: ತಾಲೂಕಿನ ಬೀರಂಡಹಳ್ಳಿಯ ನಿರಾಶ್ರಿತರ ಪರಿಹಾರ ಕೇಂದ್ರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ನಿರಾಶ್ರಿತರ ಮೌಲ್ಯವರ್ಧಿತ ಜೀವನಕ್ಕೆ ಆಸರೆಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವಿಣ್​ ಪಿ.ಬಾಗೇವಾಡಿ ಹೇಳಿದರು.

ತಾಲೂಕಿನ ಚಿಕ್ಕ ಅಂಕಾಂಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀರಂಡಹಳ್ಳಿಯ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಗುರುವಾರ ದಿಢೀರ್​ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಭಿಕ್ಷಾಟನೆ ಸಾಮಾಜಿಕ ಪಿಡುಗಾಗಿದ್ದು, ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ನಿರಾಶ್ರಿತರ ಕೇಂದ್ರ ಸ್ಥಾಪನೆ ಮಾಡಿದೆ. ಅದರಂತೆಯೇ ಇಂದು ಬೀರಂಡಹಳ್ಳಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ. ಇಲ್ಲಿನ ಅಧೀಕ್ಷಕ ಮಂಜುನಾಥ್​ ಹಾಗೂ ಸಿಬ್ಬಂದಿ ಸುನೀತಾ ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಕಂಡು ಬಂದಿದೆ. ಕೇಂದ್ರವು ಸುಸಜ್ಜಿತ ಮೂಲ ಸೌಲಭ್ಯಗಳಿಂದ ಕೂಡಿದೆ. ನಿರಾಶ್ರಿತರಲ್ಲಿ ಧನಾತ್ಮಕ ಮನೋಭಾವನೆ ಮೂಡಿಸುವ ವಾತಾವರಣ ನಿಮಾರ್ಣ ಮಾಡಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಿಶುಪಾಲನಾ ಕೇಂದ್ರಗಳ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತಾಲೂಕಿನಲ್ಲಿ ಎಷ್ಟು ಶಿಶುಪಾಲನಾ ಕೇಂದ್ರಗಳು ಸ್ಥಾಪನೆಯಾಗಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ಇಲ್ಲ. ಆದರೆ, ಶಿಶುಪಾಲನಾ ಕೇಂದ್ರ ಹಾಗೂ ಕೂಸಿನಮನೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಮಗುವಿನ ಶೈಶವಾವಸ್ಥೆ ಮತ್ತು ಬಾಲ್ಯದಲ್ಲಿ ದೈಹಿಕ, ಮಾನಸಿಕ ಹಾಗೂ ಬೌದ್ಧಿಕ ವಿಕಸನಕ್ಕೆ ಸಹಕಾರಿಯಾಗಿದೆ ಎಂದರು.

ಮಾನಸಿಕ ಸ್ಥೆ$ರ್ಯ ತುಂಬುವಲ್ಲಿ ಸಹಕಾರಿ

10 ಎಕರೆಯಲ್ಲಿ ನಿಮಾರ್ಣವಾಗಿರುವ ಕೇಂದ್ರದಲ್ಲಿ ಪ್ರಸಕ್ತ ಸಾಲಿನಲ್ಲಿ ಪುರುಷ 127, ಮಹಿಳೆಯರು 27 ಸೇರಿ ಒಟ್ಟು 157 ನಿರಾಶ್ರಿತರಿದ್ದಾರೆ. ನಿತ್ಯ ಪೌಷ್ಟಿಕ ಆಹಾರ ನೀಡಲಾಗುತ್ತಿದ್ದು ಉದ್ಯಾನವನ, ವಾಯುವಿಹಾರ ಕೇಂದ್ರಗಳು ಸಹ ಇದೆ. ಇದರೊಟ್ಟಿಗೆ ಆರೋಗ್ಯ ತಪಾಸಣೆಯ ಸೌಲಭ್ಯ ನೀಡಲಾಗುತ್ತಿದೆ. ಇಲ್ಲಿನ ನಿರಾಶ್ರಿತರು ತಾವು ಅನಾಥರು ಎಂಬ ಭಾವನೆ ಮರೆತಿದ್ದು ಆತ್ಮಸ್ಥೆ$ರ್ಯದೊಂದಿಗೆ ಜೀವಿಸುತ್ತಿದ್ದಾರೆ ಎಂದು ಜಿಪಂ ಸಿಇಒ ತಿಳಿಸಿದರು.

ರಸ್ತೆಗಾಗಿ ಪರದಾಡಿದ ಸಿಇಒ

ಈ ಹಿಂದೆ ನಿರಾಶ್ರಿತರ ಕೇಂದ್ರಕ್ಕೆ ಅನ್ಯರ ಖಾಸಗಿ ಜಮೀನಿನಲ್ಲಿ ರಸ್ತೆ ನಿಮಾರ್ಣ ಮಾಡಲಾಗಿತ್ತು. ತದನಂತರ ಮೂಲ ಜಮೀನಿನವವರು ರಸ್ತೆ ಬಂದ್​ ಮಾಡಿದ ಕಾರಣ ನಿರಾಶ್ರಿತರ ಕೇಂದ್ರಕ್ಕೆ ರಸ್ತೆ ಸಂಪರ್ಕವಿಲ್ಲದಂತಾಗಿತ್ತು. ಈ ಬಗ್ಗೆ ಮಾಹಿತಿ ಇಲ್ಲದೆ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡುವ ಸಲುವಾಗಿ ಬಂದ ಸಿಇಒ ರಸ್ತೆ ಹುಡುಕಲು ಪರದಾಡಿ ಕೊನೆಗೆ ವಾಹನಗಳನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ ಕಾಲ್ನಡಿಗೆಯಲ್ಲಿ ರೈಲ್ವೆಹಳಿದಾಟಿ ಕೇಂದ್ರಕ್ಕೆ ಭೇಟಿ ನೀಡಿದರು. ತದನಂತರ ಇಒ ರವಿಕುಮಾರ್​ ಅವರಿಗೆ ರಸ್ತೆ ನಿಮಾರ್ಣ ಮಾಡಲು ಸರ್ಕಾರಕ್ಕೆ ಮನವಿ ಸಲ್ಲಿಸುವಂತೆ ಸೂಚಿಸಿದರು. ಕೆಟ್ಟು ನಿಂತ ನಿರಾಶ್ರಿತರ ವಾಹನವನ್ನು ಶೀಘ್ರ ರಿಪೇರಿ ಮಾಡಿಸುವಂತೆ ಅಧಿಕಾರಿಗಳಿಗೆ ಜಿಪಂ ಸಿಇಒ ಪ್ರವಿಣ್​ ಪಿ.ಬಾಗೇವಾಡಿ ತಾಕೀತು ಮಾಡಿದರು.