oplus_2 
ಜಿಲ್ಲೆ

ಮಠ-ಮಾನ್ಯಗಳಿಂದ ಕಲೆಗೆ ಆಶ್ರಯ

ಮರಿದೇವ ಹೂಗಾರ

ಹುಬ್ಬಳ್ಳಿ: ಹಿಂದೆ ರಾಜರು ತಮ್ಮ ಆಸ್ಥಾನಗಳಲ್ಲಿ ಕಲೆಗೆ ರಾಜಾಶ್ರಯ ನೀಡಿದ್ದರು. ಪ್ರಸ್ತುತ ದಿನಗಳಲ್ಲಿ ಧಾರ್ಮಿಕ ಕೇಂದ್ರ ಹಾಗೂ ಮಠ -ಮಾನ್ಯಗಳು ಕಲೆಗೆ ವೇದಿಕೆ ಕಲ್ಪಿಸುತ್ತಿರುವುದು ಮಾದರಿಯಾಗಿದೆ ಎಂದು ನಿವೃತ್ತ ಪಶು ವೈದ್ಯಾಧಿಕಾರಿ ಡಾ. ಶ್ರೀಕಾಂತ ಕೋನಾಪುರ ಅಭಿಪ್ರಾಯಪಟ್ಟರು.

ರಾಮಕೃಷ್ಣ -ವಿವೇಕಾನಂದ ಆಶ್ರಮ ಹುಬ್ಬಳ್ಳಿ ಮತ್ತು ನಾದ ಹಿಂದುಸ್ತಾನಿ ಸಂಗೀತ ಕಲಾವಿದರ ವೇದಿಕೆ ವತಿಯಿಂದ ಇಲ್ಲಿಯ ಆಶ್ರಮದಲ್ಲಿ ಶನಿವಾರ ಏರ್ಪಡಿಸಿದ್ದ ಶ್ರಾವಣ ಸಂಗೀತೋತ್ಸವದಲ್ಲಿ ಅವರು ಮಾತನಾಡಿದರು.

ಗುರುಪೂರ್ಣಿಮೆ, ಶರನ್ನವರಾತ್ರಿ ಉತ್ಸವ, ಶ್ರೀಕೃಷ್ಣ ಜನ್ಮಾಷ್ಟಮಿ ಸೇರಿದಂತೆ ಪ್ರತಿ ಉತ್ಸವದಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.

ಕ್ಯಾಲಿಫೋರ್ನಿಯಾದ ಯುವ ಗಾಯಕ ಋಗ್ವೇದ ನಿತಿನ ಬರ್ವೆ ಅವರು ನಂದ ರಾಗದೊಂದಿಗೆ ತಮ್ಮ ಸಂಗೀತ ಕಾರ್ಯಕ್ರಮ ಪ್ರಾರಂಭ ಮಾಡಿ ತೀರ್ಥ ವಿಠ್ಠಲ, ಅಭೀರ ಗುಲಾಲ್, ಬಾಜೆರೆ ಮುರಳಿಯ ಬಾಜೆ ಅಭಂಗಳನ್ನು ಅತ್ಯಂತ ಸುಶ್ರಾವ್ಯವಾಗಿ ಹಾಡಿದರಲ.

ಡಾ. ನಾಗಲಿಂಗ ಮುರಗಿ ಹಾಗೂ ಶಿವಕುಮಾರ ಅರ್ಕಸಾಲಿ ತಬಲಾ, ಪ್ರೇಮಕೃಷ್ಣ ಮೇಟಿ ಹಾರ್ಮೋನಿಯಂ ಸಾಥ್ ನೀಡಿದರು. ಹುಬ್ಬಳ್ಳಿ ರಾಮಕೃಷ್ಣ- ವಿವೇಕಾನಂದ ಆಶ್ರಮ ಅಧ್ಯಕ್ಷ ಶ್ರೀ ಸ್ವಾಮಿ ತೇಜಸಾನಂದ ಮಹಾರಾಜ, ಖ್ಯಾತ ಜಲತರಂಗ ಕಲಾವಿದ ವಿದುಷಿ ಶಶಿಕಲಾ ದಾನಿ, ಕುಮಾರ ಹಾದಿಮನಿ, ವೀರಣ್ಣ ಪಿಡ್ಡನಗೌಡರ, ಮಂಜುನಾಥ ದೊಡ್ಡಮನಿ, ನಿತಿನ ಬರ್ವೆ ಉಪಸ್ಥಿತರಿದ್ದರು. ವಿಶ್ವೇಶ್ವರಯ್ಯ ಚೌಕಿಮಠ ಸ್ವಾಗತಿಸಿದರು. ಶಿವಸ್ವಾಮಿ ಹಿರೇಮಠ ನಿರೂಪಿಸಿದರು. ಡಾ. ವಿನಾಯಕ ಕುಲಕರ್ಣಿ ವಂದಿಸಿದರು.