ಜಿಲ್ಲೆ

ಅಡುಗೆ ಸಿಬ್ಬಂದಿಗೆ ತಿಂಗಳಿಗೊಮ್ಮೆ ಪುನಶ್ಚೇತನ ಕಾರ್ಯಾಗಾರ

ಆರ್.ಕೃಷ್ಣ

ಮೈಸೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಡುಗೆಯವರು ಹಾಗೂ ಸಿಬ್ಬಂದಿಗೆ ಪ್ರತಿ 3 ತಿಂಗಳಿಗೊಮ್ಮೆ ಪುನಶ್ಚೇತನ ಕಾರ್ಯಾಗಾರವನ್ನು ನಡೆಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರಾಘವೇಂದ್ರ ತಿಳಿಸಿದರು.
ಕೆ.ಆರ್.ನಗರದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾಯಂ ಮತ್ತು ಹೊರ ಸಂಪನ್ಮೂಲ ಅಡುಗೆ ಸಿಬ್ಬಂದಿಗೆ ಮಂಗಳವಾರ ಹಮ್ಮಿಕೊಂಡಿದ್ದ ಪುನಶ್ಚೇತನ ಕಾರ್ಯಾಗಾರ ಹಾಗೂ ಆರೋಗ್ಯ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಸತಿ ನಿಲಯಗಳಲ್ಲಿ ಮಕ್ಕಳಿಗೆ ಶುದ್ಧ ಕುಡಿಯುವ ನೀರನ್ನೇ ನೀಡಬೇಕು. ಪ್ರತಿ ವರ್ಷಕೊಮ್ಮೆ ನೀರಿನ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಬೇಕು. ನೀರಿನ ಸಂಪು ಮತ್ತು ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಬೇಕು. ಅಡುಗೆಯವರು ಹಾಗೂ ಸಿಬ್ಬಂದಿ ಎಲ್ಲರೂ ವಿದ್ಯಾವಂತರಿದ್ದೀರಿ ಮಕ್ಕಳು ಅವರ ತಂದೆ, ತಾಯಿಗಳಿಗಿಂತ ಹೆಚ್ಚಾಗಿ ನಿಮ್ಮ ಜೊತೆಯಲ್ಲಿ ಇರುತ್ತಾರೆ. ನಿಮ್ಮ ಮಕ್ಕಳಂತೆ ಅವರನ್ನು ನೋಡಿಕೊಳ್ಳಿರಿ ಎಂದು ಸಲಹೆ ನೀಡಿದರು.
ಪ್ರತಿಯೊಬ್ಬರಿಗೂ ಸಮಯಪ್ರಜ್ಞೆ ಇರಬೇಕು. ಸರಿಯಾದ ಸಮಯಕ್ಕೆ ಕೆಲಸಕ್ಕೆ ಬರಬೇಕು. ವಸತಿ ನಿಲಯದ ನಿಯಮಗಳನ್ನು ಪಾಲಿಸಬೇಕು. ಹಾಸ್ಟೆಲ್‌ಗಳನ್ನು ಸ್ವಚ್ಛವಾಗಿಟ್ಟುಕೊಂಡು ಅವರಿಗೆ ಮೂಲಭೂತ ಸೌಲಭ್ಯಗಳನ್ನು ನೀಡುವ ಮೂಲಕ ಶೈಕ್ಷಣಿಕವಾಗಿ ಉತ್ತಮವಾದ ವಾತಾವರಣ ನಿರ್ಮಾಣ ಮಾಡಿಕೊಡಬೇಕು. ಮಕ್ಕಳ ಜೊತೆ ಮಾತನಾಡುವಾಗ ಯೋಚನೆ ಮಾಡಿ ಮಾತನಾಡಬೇಕು ಎಂದರು.
ಆರೋಗ್ಯದ ಅರಿವಿನ ಬಗ್ಗೆ ತಾಲೂಕು ಆರೋಗ್ಯಾಧಿಕಾರಿ ಡಾ.ನಟರಾಜು ಉಪನ್ಯಾಸ ನೀಡಿದರು. ಆಹಾರ ಸುರಕ್ಷತೆಯ ಬಗ್ಗೆ ಸಂದೀಪ್ ಮತ್ತು ಮಂಜುನಾಥ್ ತಿಳಿಸಿದರು. ತಾಲೂಕು ಕಲ್ಯಾಣಾಧಿಕಾರಿ ಚಂದ್ರಕಲಾ, ಆರೋಗ್ಯ ಶಿಕ್ಷಣಾಧಿಕಾರಿ ರೇಖಾ, ವಾರ್ಡನ್, ಸಿಬ್ಬಂದಿ ಕೆ.ಸಿ.ಮಂಜುಳಾ, ಮಹೇಶ್, ಮೇಘ, ಮಧುಸೂದನ್, ಲೋಕೇಶ್, ದಿಲೀಪ್, ಧರ್ಮೇಂದ್ರ, ಸತೀಶ್, ಆಶಾ, ಗೀತಾ, ದಿವ್ಯಾ, ಪ್ರಪುಲ್ಲಾ ಮಂಜುನಾಥ್ ಇದ್ದರು. ಇದೇ ಸಂದರ್ಭ ಅಡುಗೆ ಸಿಬ್ಬಂದಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು.