ಮಂಗಳೂರು: ಕಳೆದ 15-20 ದಿನಗಳಿಂದ ಕರಾವಳಿಯಾಧ್ಯಂತ ಉತ್ತಮ ಮಳೆಯಾಗಿದ್ದು, ಬುಧವಾರ ಮಳೆ ಕ್ಷೀಣಗೊಂಡು ಹಲವಡೆ ಬಿಸಿಲು ಆವರಿಸಿತ್ತು. ಮುಂದಿನ 3 ದಿನ ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಹವಾಮಾನ ಇಲಾಖೆ ಘೋಷಿಸಿದೆ.
ಬುಧವಾರ ಬೆಳಗ್ಗೆ ಸುಳ್ಯ, ಬಂಟ್ವಾಳ, ಪುತ್ತೂರು ಸುತ್ತಮುತ್ತ ಮಳೆಯಾದರೆ ಮಂಗಳೂರು, ಬೆಳ್ತಂಗಡಿ, ಕಡಬ ಸೇರಿದಂತೆ ಹಲವಡೆ ಹನಿ ಮಳೆಯಾಗಿ ನಂತರ ಬಿಸಿಲು ಆವರಿಸಿತ್ತು. ಮಧ್ಯಾಹ್ನ ಹಾಗೂ ಸಂಜೆ ಜಿಲ್ಲೆಯ ಹಲವು ಬಾಗದಲ್ಲಿ ಮಳೆಯಾಗಿದೆ. ಸಧ್ಯದ ಮುನ್ಸೂಚನೆಯಂತೆ ಮುಂದಿನ 3 ದಿನ ಕರಾವಳಿಯಾಧ್ಯಂತ ಮಳೆ ಕಡಿಮೆಯಾಗಿ ಸಾಧಾರಣ ಬಿಸಿಲು ಆವರಿಸಲಿದೆ.
ಗುರುವಾರ ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳ ಅಲ್ಲಲ್ಲಿ ಬಿಟ್ಟು ಬಿಟ್ಟು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಜೊತೆಗೆ ಸ್ವಲ್ಪ ಗಾಳಿ ಹಾಗೂ ಬಿಸಿಲು ಸಹ ಇರಬಹುದು. ಅರಬ್ಬಿ ಸಮುದ್ರದ ವಾಯುಭಾರ ಕುಸಿತದಂತಹ ತಿರುವಿಕೆಯು ರಾಜಸ್ಥಾನ ತಲುಪಿದ್ದು, ಅಲ್ಲಿ ಶಿಥಿಲಗೊಳ್ಳುವ ಲಕ್ಷಣಗಳಿವೆ. ಬಂಗಾಳಕೊಲ್ಲಿಯ ತಿರುಗುವಿಕೆಯು ಪಶ್ಚಿಮ ಬಂಗಾಳ ತಲುಪಿದ್ದು, ಮುಂದೆ ಬಿಹಾರ ಕಡೆಗೆ ಚಲಿಸುವ ಸಾಧ್ಯತೆಗಳಿವೆ. ಮುಂದಿನ 10 ದಿನದ ಬಳಿಕ ಬಂಗಾಳಕೊಲ್ಲಿಯ ಸುತ್ತಮುತ್ತ ವಾಯುಭಾರ ಕುಸಿತದ ಸಾಧ್ಯತೆಯಿದ್ದು, ಜುಲೈ ಮೊದಲ ವಾರ ಕರಾವಳಿಯಲ್ಲಿ ಮತ್ತೆ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
*ಘಾಟ್ ಸುತ್ತಮುತ್ತ ಉತ್ತಮ ಮಳೆ
ಕರಾವಳಿಯ ತಗ್ಗುಪ್ರದೇಶದಲ್ಲಿ ಮಳೆ ಇಳಿಕೆಯಾದರೂ ಘಾಟ್ ಸುತ್ತಮುತ್ತ ಉತ್ತಮ ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ಕರಾವಳಿಯ ನದಿಗಳಲ್ಲಿ ನೀರು ಸರಾಗವಾಗಿ ಹರಿಯುತ್ತಿದ್ದು, ಅಪಾಯದ ಮಟ್ಟ ಮೀರಿಲ್ಲ. ಮಳೆಯಿಂದಾಗಿ ತುಂಬೆ ಡ್ಯಾಂ ಸೇರಿದಂತೆ ನೇತ್ರಾವತಿ ಉಪ್ಪಿನಂಗಡಿ ಭಾಗದಲ್ಲಿ ನೀರಿನ ಮಟ್ಟದಲ್ಲಿ ದೊಡ್ಡ ಮಟ್ಟಿನ ಏರಿಕೆಯಾಗಿದೆ.
----------------
ಮೂಡುಬಿದಿರೆಯಲ್ಲಿ ಅತೀ ಹೆಚ್ಚು ಮಳೆ
ದ.ಕ. ಜಿಲ್ಲೆಯಲ್ಲಿ ಬುಧವಾರ ಬೆಳಗ್ಗಿನವರೆಗೆ 55.7 ಮಿಲಿ ಮೀಟರ್ ಮಳೆ ದಾಖಲಾಗಿದೆ. ಜಿಲ್ಲೆಯಲ್ಲೆ ಅತೀ ಹೆಚ್ಚು ಮೂಡುಬಿದಿರೆ 85.4 ಮಿ.ಮೀ ಮಳೆಯಾಗಿದೆ. ಬೆಳ್ತಂಗಡಿಯಲ್ಲಿ 72.3 ಮಿ.ಮೀ, ಬಂಟ್ವಾಳ 50.4 ಮಿ.ಮೀ, ಮಂಗಳೂರು 31.1 ಮಿ.ಮೀ, ಪುತ್ತೂರು 44.1 ಮಿ.ಮೀ, ಸುಳ್ಯ 35 ಮಿ.ಮೀ, ಕಡಬ 63 ಮಿ.ಮೀ, ಮೂಲ್ಕಿ 47.9 ಮಿ.ಮೀ, ಉಳ್ಳಾಲ 31 ಮಿ.ಮೀ. ಮಳೆಯಾಗಿದೆ. ಅರಬ್ಬಿ ಸಮುದ್ರದಲ್ಲಿ ಗಾಳಿಯ ಪ್ರಮಾಣ ಗಂಟೆಗೆ 35ಕಿ.ಮೀ ನಿಂದ 40ಕಿ.ಮೀ ವರೆಗೆ ಹೆಚ್ಚಳವಾಗಿರುವುದರಿಂದ ಮೀನುಗಾರರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಜತೆಗೆ ಸಮುದ್ರ ಆಸುಪಾಸಿನ ನಿವಾಸಿಗಳು ಎಚ್ಚರಿಕೆಯಲ್ಲಿರುವಂತೆ ಜಿಲ್ಲಾಡಳಿತ ಸೂಚಿಸಿದೆ. ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಬುಧವಾರ ಗರಿಷ್ಠ 34.5 ಡಿಗ್ರಿ ಸೆಲ್ಸಿಯಸ್, ಕನಿಷ್ಠ 23.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಗುರುವಾರ ವೇಳೆ ತುಸು ಏರಿಕೆಯಾಗುವ ಸಾಧ್ಯತೆ ಇದೆ.