ಮಡಿಕೇರಿ:
ಸಾಂಬಾರ ಪದಾರ್ಥಗಳ ರಾಣಿ ಎಂದು ಕರೆಯಿಸಿಕೊಳ್ಳುವ ಏಲಕ್ಕಿಯ ಘಮಲು ಸುಮಾರು ಎರಡೂವರೆ ದಶಕಗಳ ಹಿಂದಿನ ತನಕವೂ ಕೊಡಗಿನಲ್ಲಿ ಘಮ ಘಮಿಸುತ್ತಿತ್ತು. ಆದರೆ ಕಟ್ಟೆರೋಗ, ಕೊಳೆ ರೋಗದ ಹಾವಳಿಯಿಂದ ದೊಡ್ಡ ಪ್ರಮಾಣದಲ್ಲಿ ಗಿಡಗಳು ನಾಶವಾಗಿದ್ದರೆ, ನಿರ್ವಹಣಾ ವೆಚ್ಚ, ಬೆಲೆಯ ಅನಿಶ್ಚಿತತೆಯ ಕಾರಣಕ್ಕೆ ಹೆಚ್ಚಿನ ಏಲಕ್ಕಿ ಬೆಳೆಗಾರರು ತಮ್ಮ ತೋಟವನ್ನು ಕಾಫಿ ತೋಟವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬರ ಸಹಿಷ್ಣುತೆಯ 2 ಏಲಕ್ಕಿ ತಳಿಗಳನ್ನು ಬಿಡುಗಡೆ ಮಾಡಿರುವುದು ಏಲಕ್ಕಿ ಬೆಳೆಗಾರರಲ್ಲಿ ಮತ್ತೆ ನಿರೀಕ್ಷೆ ಮೂಡಿಸಿದೆ.
ದೇಶದಲ್ಲಿ ಉತ್ಪಾದನೆಯಾಗುವ ಒಟ್ಟು ಏಲಕ್ಕಿ ಪ್ರಮಾಣದಲ್ಲಿ ಕರ್ನಾಟಕದ ಪಾಲು ಶೇ.23. ಇದರಲ್ಲಿ ಕೊಡಗಿನ ಕೊಡುಗೆ ಶೇ.40. ವಾರ್ಷಿಕ ಸರಾಸರಿ 150ರಿಂದ 250 ಇಂಚು ಮಳೆ ಬೀಳುವ ಪ್ರದೇಶದಲ್ಲಿ ಏಲಕ್ಕಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿ ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಹೋಬಳಿಯ ಪುಷ್ಪಗಿರಿ ಬೆಟ್ಟ ತಪ್ಪಲಿನ ಪ್ರದೇಶ, ಮಡಿಕೇರಿ ತಾಲೂಕಿನ ಭಾಗಮಂಡಲ, ಕಕ್ಕಬ್ಬೆ, ವಿರಾಜಪೇಟೆ ತಾಲ್ಲೂಕಿನ ಬಿರುನಾಣಿ, ಬಿ.ಶೆಟ್ಟಿಗೇರಿ ಪ್ರದೇಶದಲ್ಲಿ ಏಲಕ್ಕಿ ಪ್ರಧಾನ ಕÊಷಿಯಾಗಿದ್ದ ಕಾಲವೊಂದು ಇತ್ತು.
ಎರಡೂವರೆ ದಶಕಗಳ ಹಿಂದೆ ಏಲಕ್ಕಿ ಕಣಜವೆಂದು ಕರೆಸಿಕೊಳ್ಳುತ್ತಿದ್ದ ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಹೋಬಳಿಯ ಬೆಟ್ಟದಳ್ಳಿ, ಪುಷ್ಪಗಿರಿ, ಹಂಚಿನಳ್ಳಿ, ಕುಮಾರಳ್ಳಿ, ನಾಡ್ನಳ್ಳಿ, ಹೆಗ್ಗಡಮನೆ, ಕುಡಿಗಾಣ, ಬೀದಳ್ಳಿ, ಕೊತ್ನಳ್ಳಿ, ತಡ್ಡಿಕೊಪ್ಪ, ಮಲ್ಲಳ್ಳಿ, ಬೀದಳ್ಳಿ, ಹರಗ, ಗರ್ವಾಲೆ, ಸೂರ್ಲಬ್ಬಿ, ಮುಕ್ಕೋಡ್ಲು, ಕುಮಾರಳ್ಳಿ, ಮಾಲ್‌ಮಾನೆ, ಕೂತಿ, ತೋಳೂರುಶೆಟ್ಟಳ್ಳಿ, ಬಿಳಿಗೇರಿ, ತಾಕೇರಿ, ಕಿರಗಂದೂರು, ತಲ್ತಾರೆ ಶೆಟ್ಟಳ್ಳಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಈಗ ಏಲಕ್ಕಿ ಅಪರೂಪದ ಬೆಳೆ ಎನ್ನುವಂತಾಗಿಬಿಟ್ಟಿದೆ.
ಇತ್ತೀಚಿನ ವರ್ಷಗಳಲ್ಲಿ ಏಲಕ್ಕಿ ಉತ್ಪಾದನೆ ಇಳಿಮುಖವಾಗುತ್ತಿದೆ. ಮಳೆಯ ಕಣ್ಣಾಮುಚ್ಚಾಲೆ, ಏಲಕ್ಕಿ ಕÊಷಿ ಮೇಲೆ ದೊಡ್ಡ ಮಟ್ಟದಲ್ಲಿ ದುಷ್ಪರಿಣಾಮ ಬೀರಿದೆ. ಕಟ್ಟೆ ರೋಗ, ಕೊಳೆರೋಗ ತೋಟಗಳಿಗೆ ವ್ಯಾಪಿಸಿ ಏಲಕ್ಕಿ ಗಿಡಗಳನ್ನು ನಾಶ ಮಾಡಿದೆ. ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿರುವ ತೋಟದ ನಿರ್ವಹಣಾ ವೆಚ್ಚ ಮತ್ತು ಬೆಲೆಯಲ್ಲಿನ ಅನಿಶ್ಚಿತತೆಯೂ ಬೆಳೆಗಾರರನ್ನು ಏಲಕ್ಕಿ ಕÊಷಿಯಿಂದ ದೂರ ಸರಿಯುವಂತೆ ಮಾಡಿದೆ. ಕÊಷಿಕರಿಗೆ ಕಾಫಿ ಮೇಲಿನ ಅನಿವಾರ್ಯ ವ್ಯಾಮೋಹವೂ ಇದಕ್ಕೆ ಇನ್ನೊಂದು ಕಾರಣವಾಗಿದೆ. ನೂರಾರು ಕÊಷಿಕರು ಏಲಕ್ಕಿ ತೋಟದ ನಿರ್ವಹಣೆ ಮಾಡಲು ಸಾಧ್ಯವಾಗದೆ ಕÊಷಿಯನ್ನು ಕೈಬಿಟ್ಟಿದ್ದಾರೆ. ಏಲಕ್ಕಿ ತೋಟ ಕಾಫಿ ತೋಟವಾಗಿ ಪರಿವರ್ತನೆಯಾಗಿದೆ. ಕೊಡಗಿನಲ್ಲಿ ಒಂದು ಅಂದಾಜಿನ ಪ್ರಕಾರ ಪ್ರಸ್ತುತ 11,680 ಹೆಕ್ಟೇರ್ ಪ್ರದೇಶದಲ್ಲಿ ಏಲಕ್ಕಿ ಬೆಳೆಯಲಾಗುತ್ತಿದೆ. ಸರಾಸರಿ ಬೆಳೆಗಾರರ ಸಂಖ್ಯೆ ತೀರಾ ಇಳಿಮುಖವಾಗಿದ್ದು 750ರ ಆಸುಪಾಸಿನಲ್ಲಿದೆ.
ಭಾರತೀಯ ಸಾಂಬಾರ ಮಂಡಳಿ ಮಾಹಿತಿ ಪ್ರಕಾರ ಉತ್ತಮ ದರ್ಜೆಯ ಏಲಕ್ಕಿಗೆ ಪ್ರಸ್ತುತ ಕೆಜಿಗೆ 2,600 ರೂ ದರ ಇದೆ. ಆದರೆ ಬೇಡಿಕೆ ಇರುವಷ್ಟು ಪ್ರಮಾಣದಲ್ಲಿ ಫಸಲು ಇಲ್ಲ. ಬೆಳೆಗಾರರ ಸಂಖ್ಯೆ ಮತ್ತೆ ಜಾಸ್ತಿ ಆದರಷ್ಟೇ ಮಾರುಕಟ್ಟೆಗೆ ಏಲಕ್ಕಿ ಹೆಚ್ಚಿನ ಪ್ರಮಾಣದಲ್ಲಿ ಬರಲು ಸಾಧ್ಯ. ಇದಕ್ಕಾಗಿ ತೋಟ ವಿಸ್ತರಣೆಗೆ ಉತ್ತಮ ತಳಿಯ ಗಿಡಗಳು ಬೇಕು. ಈ ನಿಟ್ಟಿನಲ್ಲಿ ಭಾರತೀಯ ಸಾಂಬಾರ ಬೆಳೆಗಳ ಸಂಶೋಧನಾ ಸಂಸ್ಥೆ ನಿರಂತರ ಸಂಶೋಧನೆಗಳನ್ನು ನಡೆಸುತ್ತಿದ್ದು, ಬರ ಸಹಿಷ್ಣುತೆ ಗುಣಗಳನ್ನು ಹೊಂದಿರುವ 2 ತಳಿಯ ಏಲಕ್ಕಿ ಗಿಡಗಳನ್ನು ರೂಪಿಸಿದೆ. ಏಲಕ್ಕಿ ಬೆಳೆಗಾರರಲ್ಲಿ ದೊಡ್ಡ ನಿರೀಕ್ಷೆ ಮೂಡಿಸಿರುವ ಈ ತಳಿಗಳನ್ನು 109 ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ತಳಿಗಳನ್ನು ರೈತ ಸಮುದಾಯಕ್ಕೆ ಸಮರ್ಪಿಸುವ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬಿಡುಗಡೆ ಮಾಡಿದ್ದಾರೆ.
ದೇಶದಲ್ಲಿ ಏಲಕ್ಕಿ ಸಂಶೋಧನೆಯನ್ನು ಭಾರತೀಯ ಕೃಷಿ ಅನುಸಂದಾನ ಪರಿಷತ್ತು, ಸಾಂಬಾರ ಮಂಡಳಿ ಹಾಗೂ ರಾಜ್ಯ ತೋಟಗಾರಿಕೆ ಮತ್ತು ಕೃಷಿ ವಿಶ್ವವಿದ್ಯಾಲಯಗಳು ನಡೆಸುತ್ತಿವೆ. ನವದೆಹಲಿಯ ಭಾರತೀಯ ಕೃಷಿ ಅನುಸಂದಾನ ಪರಿಷತ್ತು ಅಡಿಯಲ್ಲಿ ಕಲ್ಲಿಕೋಟೆಯ ಭಾರತೀಯ ಸಾಂಬಾರ ಬೆಳೆಗಳ ಸಂಶೋಧನೆ ಸಂಸ್ಥೆ ಏಲಕ್ಕಿ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಏಕೈಕ ಸಂಸ್ಥೆಯಾಗಿದೆ. ಏಲಕ್ಕಿ ತಳಿ ಸಂಪನ್ಮೂಲಗಳ ಸಂರಕ್ಷಣೆ ಮತ್ತು ತಳಿ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಐ. ಸಿ. ಎ. ಆರ್. ಭಾರತೀಯ ಸಂಬಾರ ಬೆಳೆಗಳ ಸಂಶೋಧನೆ ಸಂಸ್ಥೆಯ ಪ್ರಾದೇಶಿಕ ಕೇಂದ್ರ ಕೊಡಗಿನ ಅಪ್ಪಂಗಳದಲ್ಲಿದ್ದು, ಏಲಕ್ಕಿಗೆ ಸಂಬAಧಿಸಿದAತೆ ಇಲ್ಲಿ ಸದ್ದಿಲ್ಲದೆ ಸಾಕಷ್ಟು ಕೆಲಸಗಳು ನಡೆಯುತ್ತಿದೆ.
ಅಪ್ಪಂಗಳದ ಭಾರತೀಯ ಸಂಬಾರ ಬೆಳೆಗಳ ಸಂಶೋಧನೆ ಸಂಸ್ಥೆಯ ಪ್ರಾದೇಶಿಕ ಕೇಂದ್ರ ಬರ ಸಹಿಷ್ಣುತೆಯ ವಿಶಿಷ್ಟ ಲಕ್ಷಣಗಳೊಂದಿಗೆ ಈಚೆಗೆ ಅಭಿವೃದ್ಧಿಪಡಿಸಿರುವ ಐ.ಐ.ಎಸ್.ಆರ್. ಮನುಶ್ರೀ ಮತ್ತು ಐ.ಎಸ್.ಆರ್. ಕಾವೇರಿ ಎನ್ನುವ ಎರಡು ಏಲಕ್ಕಿ ತಳಿಗಳು ಈಗ ಬೆಳೆಗಾರರ ಆಸಕ್ತಿ ಕೆರಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಈ ತಳಿಗಳನ್ನು ಭಾನುವಾರವಷ್ಟೇ (ಆ.11) ಬಿಡುಗಡೆ ಮಾಡಿದ್ದು, ಈ ಎರಡು ತಳಿಗಳು ಬೆಳೆ ಗುಣಮಟ್ಟ, ಅಧಿಸೂಚನೆ ಮತ್ತು ತೋಟಗಾರಿಕಾ ಬೆಳೆಗಳಿಗೆ ತಳಿಗಳ ಬಿಡುಗಡೆಯ ಕೇಂದ್ರ ಉಪ ಸಮಿತಿಯಿಂದ ಅಗತ್ಯವಾದ ನಿಯಂತ್ರಣ ಅನುಮೋದನೆಯನ್ನೂ ಪಡೆದಿವೆ.
ಐ.ಐ.ಎಸ್.ಆರ್. ಮನುಶ್ರೀ ಮತ್ತು ಐ.ಎಸ್.ಆರ್. ಕಾವೇರಿ ತಳಿಗಳನ್ನು ಅಪ್ಪಂಗಳದ ಭಾರತೀಯ ಸಂಬಾರ ಬೆಳೆಗಳ ಸಂಶೋಧನೆ ಸಂಸ್ಥೆಯ ಪ್ರಾದೇಶಿಕ ಕೇಂದ್ರದ ಮುಖ್ಯಸ್ಥರೂ ಆದರ ಪ್ರಧಾನ ವಿಜ್ಞಾನಿ ಡಾ. ಎಸ್. ಜೆ. ಅಂಕೇಗೌಡ ಮತ್ತು ತಂಡ ಅಭಿವೃದ್ಧಿಪಡಿಸಿದೆ. ಈ ಎರಡೂ ತಳಿಗಳು ಮಲಬಾರ್ ಪ್ರಭೇದಕ್ಕೆ ಸೇರಿದ್ದು ಕೊತ್ತುಗಳು ನೆಲದ ಮೇಲೆ ಹರಡಿಕೊಂಡಿರುತ್ತವೆ. ಬರ ಸಹಿಷ್ಣುತೆಯ ವಿಶಿಷ್ಟ ಲಕ್ಷಣವನ್ನೂ ಹೊಂದಿವೆ.
ಐ.ಐ.ಎಸ್.ಆರ್. ಮನುಶ್ರೀ ತಳಿ ಸ್ಥಿರ ಇಳುವರಿಯನ್ನು ನೀಡುತ್ತದೆ. ಹೆಕ್ಟೇರ್‌ಗೆ 550 ರಿಂದ 360 ಕೆಜಿ ಸರಾಸರಿ ಒಣ ಇಳುವರಿ ಕೊಡುತ್ತದೆ. ಶೇ 50ರಷ್ಟು ಕಾಯಿಗಳ 8ಮಿಮೀಗಿಂತಲೂ ಹೆಚ್ಚು ಇರುತ್ತದೆ. ಇದು ನೀರಾವರಿ ಪ್ರದೇಶದಲ್ಲಿ ಶೇ. 8.74 ಮತ್ತು ತೇವಾಂಶದ ಒತ್ತಡದ ಪ್ರದೇಶದಲ್ಲಿ ಶೇ 8.84 ರಷ್ಟು ತೈಲಾಂಶ ಹೊಂದಿರುತ್ತದೆ. ಈ ತಳಿ ಕರ್ನಾಟಕ ಮತ್ತು ಕೇರಳದ ಏಲಕ್ಕಿ ಬೆಳೆಯುವ ಪ್ರದೇಶಗಳಲ್ಲಿ ಬೆಳೆಯಲು ಸೂಕ್ತವಾಗಿದೆ. ಐ.ಐ.ಎಸ್.ಆರ್. ಕಾವೇರಿ ತಳಿ ಹೆಚ್ಚು ಸಾಂದ್ರವಾಗಿ ಕಾಯಿಗಳನ್ನು ಬಿಡುವ ತಳಿಯಾಗಿದೆ. ಶೇ. 70 ರಷ್ಟು ಕಾಯಿಗಳು 8 ಮಿಮೀ ಗಿಂತ ದೊಡ್ಡ ಗಾತ್ರ ಹೊಂದಿರುತ್ತವೆ. ಹೆಕ್ಟೇರ್‌ಗೆ ಸರಾಸರಿ 482 ರಿಂದ 308 ಕೆಜಿ ಇಳುವರಿ ಕೊಡುತ್ತದೆ. ನೀರಾವರಿ ಪ್ರದೇಶದಲ್ಲಿ ಶೇ. 9.08 ಮತ್ತು ತೇವಾಂಶದ ಒತ್ತಡದ ಪ್ರದೇಶದಲ್ಲಿ ಶೇ 9.51 ತೈಲಂಶ ಹೊಂದಿರುತ್ತದೆ. ಈ ತಳಿ ಕರ್ನಾಟಕದ ಏಲಕ್ಕಿ ಬೆಳೆಯುವ ಪ್ರದೇಶದಲ್ಲಿ ಬೆಳೆಯಲು ಸೂಕ್ತವಾಗಿದೆ.
ಮಣ್ಣಿನ ತೇವಾಂಶ ಏಲಕ್ಕಿ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಅತಿ ಮುಖ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಏಲಕ್ಕಿ ಬೆಳೆಯುವ ಪ್ರದೇಶಗಳನ್ನು ಹೊರತುಪಡಿಸಿ ಬೇರೆ ಪ್ರದೇಶಗಳಿಂದ ಯುವ ಕೃಷಿಕರು ಏಲಕ್ಕಿ ಬೆಳೆಯಲು ಆಸಕ್ತಿ ಹೊಂದಿದ್ದಾರೆ. ಈ ಪ್ರದೇಶಗಳಲ್ಲಿ ಬೇಸಿಗೆಯ ತಿಂಗಳುಗಳಲ್ಲಿ ಬೆಳೆ ತೇವಾಂಶದ ಒತ್ತಡವನ್ನು ಅನುಭವಿಸುತ್ತದೆ. ಆ ಪ್ರದೇಶಗಳಲ್ಲಿಯೂ ಸಹ ಈ ತಳಿಗಳನ್ನು ಬೆಳೆಯುವ ಪ್ರಯತ್ನ ಮಾಡಬಹುದು. ಇಂದಿನ ಮಾರುಕಟ್ಟೆಯಲ್ಲಿ ಆಕರ್ಷಕ ಹಸಿರು ಬಣ್ಣ ಮತ್ತು ದಪ್ಪ ಕಾಯಿಗಳನ್ನು ಹೊಂದಿರುವ ಏಲಕ್ಕಿಗೆ ಹೆಚ್ಚಿನ ಆದ್ಯತೆ ಮತ್ತು ದರ ಸಿಗುತ್ತದೆ. ಆದುದ್ದರಿಂದ ಹೆಚ್ಚಿನ ಶೇಕಡಾವಾರು ದಪ್ಪ ಕಾಯಿಗಳನ್ನು ಹೊಂದಿರುವ ಐಐಎಸ್‌ಆರ್ ಕಾವೇರಿ ತಳಿ ಪ್ರೀಮಿಯಂ ಬೆಲೆ ಪಡೆಯುತ್ತದೆ.
ಡಾ. ಎಸ್. ಜೆ. ಅಂಕೇಗೌಡ, ಮುಖ್ಯಸ್ಥರು, ಭಾರತೀಯ ಸಂಬಾರ ಬೆಳೆಗಳ ಸಂಶೋಧನೆ ಸಂಸ್ಥೆಯ ಪ್ರಾದೇಶಿಕ ಕೇಂದ್ರ ಅಪ್ಪಂಗಳ