ಮೈಸೂರು: ಪ್ಲಾಸ್ಟಿಕ್ ಬಳಕೆ ಸಂಪೂರ್ಣ ತ್ಯಜಿಸಲು ಸಾಧ್ಯವಾಗದೆ ಇದ್ದರೂ ಬಳಕೆ ಪ್ರಮಾಣ ಕಡಿಮೆ ಮಾಡಿ ಪರಿಸರ ಉಳಿವಿಗೆ ಕೊಡುಗೆ ನೀಡಬೇಕು ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕರೆ ನೀಡಿದರು.
ನಗರದ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಸಿಎಫ್‌ಟಿಆರ್‌ಐ) ಇಂಡಿಯನ್ ಪಲ್ಪ್ ಆ್ಯಂಡ್ ಪೇಪರ್ ಟೆಕ್ನಿಕಲ್ ಅಸೋಸಿಯೇಷನ್(ಇಪ್ಟಾ) ಹಾಗೂ ಸಿಎಫ್‌ಟಿಆರ್‌ಐ ವತಿಯಿಂದ ಆಹಾರದ ಪ್ಯಾಕೇಜಿಂಗ್‌ನಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಬದಲು ಕಾಗದ ಬಳಕೆ ಕುರಿತು ಹಮ್ಮಿಕೊಂಡಿದ್ದ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಪ್ಲಾಸ್ಟಿಕ್ ತ್ಯಾಜ್ಯವು ಮಣ್ಣು, ನದಿ ಹಾಗೂ ಪರಿಸರಕ್ಕೆ ಸೇರಿ ಭೂಮಿ ಹಾಗೂ ಜಲಮೂಲಗಳು ಕಲುಷಿತಗೊಳ್ಳುತ್ತಿದೆ. ಇದರ ನೇರ ಪರಿಣಾಮ ಜೀವ ಸಂಕುಲದ ಮೇಲೆ ಬೀರುತ್ತಿದೆ. ಪ್ಲಾಸ್ಟಿಕ್ ಮಣ್ಣಿನ ಆರೋಗ್ಯ ಹದಗೆಡಿಸುತ್ತಿದೆ. ಇದರಿಂದ ನಾವು ಸೇವಿಸುವ ಆಹಾರದಲ್ಲಿ ಹಲವಾರು ಸಮಸ್ಯೆಗಳು ಕಂಡು ಬರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಬೆಂಗಳೂರಿನಿಂದ ಮೈಸೂರಿಗೆ ಇಂದು ಆಗಮಿಸುವ ಸಂದರ್ಭ ಹಲವಾರು ಕಡೆಗಳಲ್ಲಿ ತ್ಯಾಜ್ಯದ ರಾಶಿಗಳನ್ನು ಗಮನಿಸಿದೆ. ತ್ಯಾಜ್ಯದ ರಾಶಿಯಲ್ಲಿ ಪ್ಲಾಸ್ಟಿಕ್ ದೊಡ್ಡ ಪ್ರಮಾಣದಲ್ಲಿ ಇದ್ದು, ಪರಿಸರದ ಮೇಲೆ ದೊಡ್ಡ ದುಷ್ಪರಿಣಾಮ ಬೀರುತ್ತಿದೆ. ಇದೊಂದು ಗಂಭೀರವಾದ ಸಮಸ್ಯೆಯಾಗಿದೆ. ನಮ್ಮ ಸುತ್ತಲಿನ ಪರಿಸರವನ್ನು ಶುಚಿಯಾಗಿರಿಸುವ ಮೂಲಕ ಸ್ವಚ್ಛ ಭಾರತವನ್ನು ಮುಂದಿನ ಪೀಳಿಗೆಗೋಸ್ಕರ ನಿರ್ಮಾಣ ಮಾಡಬೇಕು ಎಂದರು. ವೇದಿಕೆಯಲ್ಲಿ ಇಪ್ಟಾ ಅಧ್ಯಕ್ಷ ಗಣೇಶ್ ಭಡ್ತಿ, ಇಪ್ಟಾ ಕಾರ್ಯದರ್ಶಿ ಎಂ.ಕೆ.ಗೋಯಲ್, ಕಾರ್ಯಕ್ರಮ ಸಮಿತಿ ಅಧ್ಯಕ್ಷ ಪ್ರೊ.ರಾಜೇಶ್ವರ್ ಎಸ್.ಮಾಚೆ ಇದ್ದರು.