ಜಿಲ್ಲೆ

ಕೆಂಪುಕಲ್ಲು ಕ್ವಾರಿಗೆ ದಾಳಿ

Dakshina Kannada

ಪುತ್ತೂರು: ಗುತ್ತಿಗಾರಿನಲ್ಲಿ ನಡೆಯುತ್ತಿದ್ದ ಅನಧಿಕೃತ ಕೆಂಪುಕಲ್ಲು ಕ್ವಾರಿ ಪ್ರದೇಶಕ್ಕೆ ಸುಳ್ಯದ ಕಂದಾಯ ಅಧಿಕಾರಿಗಳು ದಾಳಿ ನಡೆಸಿ ಗಣಿಗಾರಿಕೆಗೆ ಬಳಸುವ ಯಂತ್ರೋಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಅನಧಿಕೃತ ಕೆಂಪುಕಲ್ಲು ಗಣಿಗಾರಿಕೆಯಿಂದ ಪುಷ್ಪಗಿರಿ ರಾಷ್ಟ್ರೀಯ ಉದ್ಯಾನವನ, ಬಂಟಮಲೆ, ಗುತ್ತಿಗಾರಿನ ಬೆಟ್ಟಗಳು ಆಪತ್ತಿಗೊಳಗಾಗಿದೆ ಎಂದು ಮಾ.19ರಂದು ವಿಜಯವಾಣಿ ವಿಶೇಷ ವರದಿ ಪ್ರಕಟಿಸಿತ್ತು. ವರದಿ ಆಧಾರದಲ್ಲಿ ಸ್ಥಳ ಪರಿಶೀಲನೆ ನಡೆಸುವಂತೆ ಕಂದಾಯ ಅಧಿಕಾರಿಗಳಿಗೆ ಸುಳ್ಯ ತಾಲೂಕು ತಹಸೀಲ್ದಾರ್ ಅನಂತ ಶಂಕರ್ ಆದೇಶಿಸಿದ್ದರು. ಸ್ಥಳ ಪರಿಶೀಲನೆ ಸಂದರ್ಭ ಗಣಿಗಾರಿಕೆ ಸ್ಥಗಿತಗೊಂಡಿದ್ದು, ಗಣಿಗಾರಿಕೆಗೆ ಬಳಸುವ ಯಂತ್ರೋಪಕರಣಗಳು ಚಾಲನಾ ಸ್ಥಿತಿಯಲ್ಲಿದ್ದವು. ತಹಸೀಲ್ದಾರ್ ಸೂಚನೆಯಂತೆ ಗಣಿಗಾರಿಕೆಗೆ ಬಳಸುವ ಯಂತ್ರೋಪಕರಣಗಳನ್ನು ವಶಪಡಿಸಿಕೊಳ್ಳಲಾಯಿತು.

ಇಲಾಖೆ ಅಧಿಕಾರಿಗಳು ಶಾಮಿಲು? 8 ವರ್ಷದಿಂದ ಗುತ್ತಿಗಾರಿನಲ್ಲಿ ಸದ್ದಿಲ್ಲದೆ ಅನಧಿಕೃತ ಕೆಂಪುಕಲ್ಲು ಗಣಿಗಾರಿಕೆ ನಡೆಯುತ್ತಿದ್ದರೂ, ಜಿಲ್ಲಾ ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಕ್ರಮ ಕೈಗೊಂಡಿಲ್ಲ. ವಿಜಯವಾಣಿ ವರದಿ ಆಧಾರದಲ್ಲಿ ಗುತ್ತಿಗಾರು ಕೆಂಪುಕಲ್ಲು ಗಣಿಗಾರಿಕೆಗೆ ಬಳಸುವ ಯಂತ್ರೋಪಕರಣ ವಶಪಡಿಸಿಕೊಂಡ ಸುಳ್ಯ ತಹಸೀಲ್ದಾರ್, ನಿಗದಿತ ವ್ಯಾಪ್ತಿಗಿಂತ ಅಧಿಕ ಪ್ರಮಾಣದಲ್ಲಿ ಗಣಿಗಾರಿಕೆ ಪರಿಣಾಮ ಉಂಟಾದ ಗುಂಡಿಗಳನ್ನು ಮುಚ್ಚಲು ಯಾವುದೇ ಕ್ರಮ ಕೈಗೊಂಡಿಲ್ಲ. ಗುತ್ತಿಗಾರಿನ ಅನಧಿಕೃತ ಕೆಂಪುಕಲ್ಲು ಗಣಿಗಾರಿಕೆ ಜಿಲ್ಲಾ ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ನೇರ ಶಾಮೀಲಿನಿಂದ ನಡೆಯುತ್ತಿತ್ತೇ ಎಂದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.

ಗುತ್ತಿಗಾರು ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅನಧಿಕೃತ ಗಣಿಗಾರಿಕಾ ಪ್ರದೇಶಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಕೆಂಪುಕಲ್ಲು ಗಣಿಗಾರಿಕೆ ನಡೆದ ದಾಖಲೆ ಸಿಕ್ಕಿದೆ. ಈ ಪ್ರದೇಶದಲ್ಲಿದ್ದ ಗಣಿಗಾರಿಕೆಗೆ ಬಳಸುವ ಯಂತ್ರೋಪಕರಣ ವಶಪಡಿಸಿಕೊಳ್ಳಲಾಗಿದೆ. ಅನಂತ ಶಂಕರ್, ಸುಳ್ಯ ತಹಸೀಲ್ದಾರ್