ದಾಬಸ್‌ಪೇಟೆ: ಗ್ರಾಮಾಂತರ ಜಿಲ್ಲೆಯಲ್ಲಿ ಬೃಹತ್ ಕೈಗಾರಿಕಾ ವಲಯವಾಗಿ ಗುರುತಿಸಿಕೊಂಡಿರುವ ಸೋಂಪುರ ಕೈಗಾರಿಕಾವಲಯವನ್ನು ಒಳಗೊಂಡಿರುವ ದಾಬಸ್‌ಪೇಟೆಯಲ್ಲಿ ಸರ್ಕಾರಿ ಸಾರಿಗೆ ಬಸ್ ನಿಲ್ದಾಣ ಕಾಮಗಾರಿ ನನೆಗುದಿಗೆ ಬಿದ್ದಿದೆ. ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಕಾಮಗಾರಿ ಆರಂಭಕ್ಕೆ ಗ್ರೀನ್ ಸಿಗ್ನಲ್ ಸಿಗುತ್ತಿಲ್ಲ.
ನೆಲಮಂಗಲ ತಾಲೂಕು ದಾಬಸ್‌ಪೇಟೆ ಹೋಬಳಿ ನಗರೀಕರಣದತ್ತ ವೇಗವಾಗಿ ಮುನ್ನುಗ್ಗುತ್ತಿದೆ, ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಿಂದ ಉದ್ಯೋಗಕ್ಕಾಗಿ ಸಾವಿರಾರು ಮಂದಿ ಇಲ್ಲಿಗೆ ಬಂದು ಹೋಗುತ್ತಾರೆ, ಆದರೆ ಇಲ್ಲಿನ ಸೂಕ್ತ ಸಾರಿಗೆ ಬಸ್ ನಿಲ್ದಾಣವಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ.
2 ವರ್ಷದಿಂದ ನನೆಗುದಿಗೆ: 2023ರಲ್ಲಿ ಸುಮಾರು 69 ಲಕ್ಷ ರೂ.ವೆಚ್ಚದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು. ಇದಾಗಿ 2 ವರ್ಷ ಕಳೆದರೂ ಕಾಮಗಾರಿ ಟೇಕ್ಾ ಆಗುತ್ತಿಲ್ಲ. ಕಾಮಗಾರಿ ಹಿನ್ನೆಲೆಯಲ್ಲಿ ಸಂಪ್‌ಗಾಗಿ ಗುಂಡಿ ತೆಗೆದು ಹಾಗೇ ಬಿಡಲಾಗಿದೆ. ಶೌಚಗೃಹ ನಿರ್ಮಾಣಕ್ಕೆ ತೋಡಿರುವ ಗುಂಡಿಗಳು ಬಾಯ್ತೆರೆದಿವೆ. ಇದರಿಂದ ಕಾಮಗಾರಿ ನಡೆಸಬೇಕಾದ ಸ್ಥಳಗಳ ಸುತ್ತಮುತ್ತಲ ಪ್ರದೇಶದ ಜನವಸತಿ ಪ್ರದೇಶಗಳ ಶೌಚ ವ್ಯವಸ್ಥೆ ಅಸ್ತವ್ಯಸ್ತವಾಗಿದ್ದು, ಮಲಿನ ನೀರು ರಸ್ತೆಯಲ್ಲಿ ಹರಿಯುವಂತಾಗಿದೆ. ಪ್ರತಿದಿನ ದುರ್ವಾಸನೆ ಸಹಿಸುತ್ತಿರುವ ನಿವಾಸಿಗಳು ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಬಸ್ ನಿಲ್ದಾಣ ಕಾಮಗಾರಿಗಾಗಿ ಕೆಲವು ಮರಗಳನ್ನು ಕಡಿಯಲು ಗುರುತು ಹಾಕಲಾಗಿದೆ. ಅವುಗಳು ಹಾಗೇ ಇವೆ, ಜಲ್ಲಿ, ಮರಳು ತಂದು ಸುರಿಯಲಾಗಿದ್ದರೂ ಅವು ಮಣ್ಣುಪಾಲಾಗಿವೆ. ಜನರ ತೆರಿಗೆ ಹಣ ಪೋಲಾಗುತ್ತಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇತ್ತ ಕಡೆ ತಲೆ ಹಾಕುತ್ತಿಲ್ಲ.
ಗುತ್ತಿಗೆದಾರನ ಬದಲಾವಣೆ
ಬಸ್ ನಿಲ್ದಾಣದ ಕಾಮಗಾರಿ ಸ್ಥಗಿತವಾಗಿರುವುದು ಗಮನಕ್ಕೆ ಬಂದಿದೆ, ಗುತ್ತಿಗೆದಾರರ ಸಮಸ್ಯೆಯಿಂದಾಗಿ ಕಾಮಗಾರಿ ಆರಂಭವಾಗಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಬೇರೆ ಗುತ್ತಿಗೆದಾರರನ್ನು ನೇಮಿಸಿ ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದು ತುಮಕೂರು ಕೆಎಸ್‌ಅರ್‌ಟಿಸಿ ವ್ಯವಸ್ಥಾಪಕರು ಪ್ರತಿಕ್ರಿಯಿಸಿದ್ದಾರೆ.
ಬಸ್ ನಿಲ್ದಾಣದ ಸಮೀಪವೇ ನಮ್ಮ ಮನೆ ಇದೆ, ಬಸ್ ನಿಲ್ದಾಣ ಕಾಮಗಾರಿಗಾಗಿ ಶೌಚಗುಂಡಿ ತೆಗೆದು ಹಾಗೇ ಬಿಟ್ಟಿದ್ದಾರೆ. ಇದರಿಂದ ಮಲಿನ ನೀರು ಹೊರಸೂಸಿ ಗಬ್ಬುವಾಸನೆ ಬರುತ್ತಿದೆ. ಪ್ರತಿದಿನ ನರಕಹಿಂಸೆ ಅನುಭವಿಸುವಂತಾಗಿದೆ. ಈ ಬಗ್ಗೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಕ್ರಮಕ್ಕೆ ಮುಂದಾಗಿಲ್ಲ. -ರಂಗನಾಥ್, ದಾಬಸ್‌ಪೇಟೆ ಸುಮಾರು 69 ಲಕ್ಷ ರೂ.ವೆಚ್ಚದಲ್ಲಿ ಕಾಮಗಾರಿ ಆರಂಭಿಸಿದರೂ ಅದು ಅಲ್ಲೇ ನಿಂತಿದೆ. ಈ ಬಗ್ಗೆ ಯಾರೊಬ್ಬರು ತಲೆಕೆಡಿಸಿಕೊಳ್ಳುತ್ತಿಲ್ಲ. ಕಾಮಗಾರಿಗೆ ವೇಗ ನೀಡಿ ಪೂರ್ಣಗೊಳಿಸಿದಿದ್ದರೆ ಈ ಭಾಗದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. -ಜೆ.ಜಗದೀಶ್, ಜಿಲ್ಲಾಧ್ಯಕ್ಷ, ರೈತ ಸಂಘ ಒಕ್ಕೂಟ ದಾಬಸ್‌ಪೇಟೆಯಲ್ಲಿನ ಸೋಂಪುರ ಬೃಹತ್ ಕೈಗಾರಿಕಾ ಪ್ರದೇಶವಾಗಿ 6 ಹಂತಗಳಲ್ಲಿ ಬೆಳೆದಿದೆ, ಪ್ರತಿನಿತ್ಯ ವಿವಿಧ ಭಾಗಗಳಿಂದ ಸಾವಿರಾರು ಮಂದಿ ಬಂದು ಹೋಗುತ್ತಾರೆ. ಆದರೆ ಇದುವರೆಗೆ ಇಲ್ಲಿ ಸುಸಜ್ಜಿತ ಬಸ್ ನಿಲ್ದಾಣ ಆರಂಭಿಸಲು ಕಾಲ ಕೂಡಿಬರುತ್ತಿಲ್ಲ. -ಸುರೇಶ್‌ಕುಮಾರ್, ದಾಬಸ್‌ಪೇಟೆ ಜನರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಲ್ಲಿ ಸರ್ಕಾರಗಳು ಹಲವು ಯೋಜನೆ ಜಾರಿಗೊಳಿಸುವತ್ತವೆ. ಆದರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದ ಲವಾಗಿ ಯೋಜನೆಗಳು ಜನರಿಗೆ ತಲುಪುವುದೇ ಇಲ್ಲ. ಇಲ್ಲಿಯೂ ಹಾಗೇ ಆಗಿದೆ ನಿಲ್ದಾಣ ಕಾಮಗಾರಿ ಆರಂಭಿಸಲು ಹಣ ಬಿಡುಗಡೆಯಾಗಿದೆ ಎನ್ನಲಾದರೂ ಕಾಮಗಾರಿ ಆರಂಭಿಸಲು ಮೀನಮೇಷ ಏಣಿಸಲಾಗುತ್ತಿದೆ. - ವಿಜಯ್‌ಕುಮಾರ್, ಸೋಂಪುರ