ಉಡುಪಿ: ರೆಡ್ಕ್ರಾಸ್ ಸಂಸ್ಥೆಯು ಮಾನವೀಯ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಯುದ್ಧದ ಸಂದರ್ಭ, ಪ್ರಾಕೃತಿಕ ವಿಕೋಪ ಸೇರಿದಂತೆ ಇನ್ನಿತರ ತುರ್ತು ಸಂದರ್ಭದಲ್ಲಿ ನೆರವಿಗೆ ಧಾವಿಸುತ್ತಿದೆ. ರೆಡ್ಕ್ರಾಸ್ ಸಂಸ್ಥೆಯು ವಿಕಲಚೇತನರಿಗೆ ಅಗತ್ಯವಿರುವ ಸಾಧನ ಸಲಕರಣೆಗಳನ್ನು ತಯಾರಿಸಿ, ವಿತರಿಸುತ್ತಿದೆ. ವಿಕಲಚೇತನರ ಶ್ರೇಯೋಭಿವೃದ್ಧಿಗೆ ಸ್ಪಂದಿಸುವುದು ಸಂಸ್ಥೆಯ ಆದ್ಯ ಕರ್ತವ್ಯವಾಗಿದೆ ಎಂದು ರೆಡ್ಕ್ರಾಸ್ ಸಂಸ್ಥೆಯ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಹೇಳಿದರು.
ಸೋಮವಾರ ಬ್ರಹ್ಮಗಿರಿಯ ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಸಭಾಂಗಣದಲ್ಲಿ ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಭಾರತೀಯ ರೆಡ್ಕ್ರಾಸ್ ಸಂಸ್ಥೆ ಮತ್ತು ದಿ ಅಸೋಸಿಯೇಶನ್ ಆಫ್ ಪೀಪಲ್ ವಿಥ್ ಡಿಸೆಬಿಲಿಟಿ ಸಂಯುಕ್ತ ಆಶ್ರಯದಲ್ಲಿ ವಿಕಲಚೇತನರಿಗೆ ಕೌಶಲ್ಯಾಧಾರಿತ ತರಬೇತಿ ಮತ್ತು ಉದ್ಯೋಗ ಪೂರ್ವ ಮಾಹಿತಿ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನಾ ಮಾತನಾಡಿ, ಅಂಗವಿಕಲರು ಮನೆಯೊಳಗೆ ಸೀಮಿತವಾಗಿರದೆ ಇಲಾಖೆ ಹಾಗೂ ಸಂಘ-ಸಂಸ್ಥೆಗಳ ವತಿಯಿಂದ ನೀಡಲಾಗುವ ತರಬೇತಿಗಳ ಸದುಪಯೋಗವನ್ನು ಪಡೆದುಕೊಂಡು ಜೀವನ ನಡೆಸಬೇಕು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ನಿವೃತ್ತ ಅಧಿಕಾರಿ ನಿರಂಜನ್ ಭಟ್ ಮಾತನಾಡಿ, ವಿಕಲಚೇತನರು ಅಂಗವಿಕಲತೆಯ ಬಗ್ಗೆ ಕೀಳರಿಮೆ ಹೊಂದದೇ ತಮ್ಮ ವಾಸ್ತವ ಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ನಾವು ಅಂಗವಿಕಲರು ಎಂಬುದನ್ನು ಮನಸ್ಸಿನಿಂದ ತೊರೆದು, ಸಕಾರಾತ್ಮಕ ಚಿಂತನೆಗಳನ್ನು ಅಳವಡಿಸಿಕೊಂಡು ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಎಪಿಡಿ ಸಂಸ್ಥೆಯ ಜಿಲ್ಲಾ ಯೋಜನಾ ಸಂಯೋಜಕ ಹರೀಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಪದಕವನ್ನು ವಿತರಿಸಲಾಯಿತು. ಎಪಿಡಿ ಸಂಸ್ಥೆಯ ನೇಮಕಾತಿ ಅಧಿಕಾರಿ ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು. ತರಬೇತುದಾರರಾದ ಸುನೀತಾ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು.