ಮಂಗಳೂರು : ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ದ.ಕ.ಜಿಲ್ಲೆ ಇದರ ವತಿಯಿಂದ ಮಧ್ಯ ಚೇಳಾರು ಗ್ರಾಮ ಪಂಚಾಯಿತಿಯ ಕೊರಗ ಸಮುದಾಯ ಭವನದಲ್ಲಿ ಶುಕ್ರವಾರ ಆರೋಗ್ಯ ನೈರ್ಮಲ್ಯ ಕಿಟ್ ವಿತರಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೆಡ್‌ಕ್ರಾಸ್ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತರಾಮ ಶೆಟ್ಟಿ ಮಾತನಾಡಿ ‘ ಆರೋಗ್ಯ ಜಾಗೃತಿ ಶಿಕ್ಷಣದ ಮೂಲಕ ಸಮುದಾಯದ ಸಬಲೀಕರಣ ಸಾಧ್ಯ. ರೆಡ್‌ಕ್ರಾಸ್ ಸಂಸ್ಥೆಯ ವತಿಯಿಂದ ಮುಂದಿನ ದಿನಗಳಲ್ಲಿ ಕೊರಗ ಸಮುದಾಯದವರಿಗೆ ಆರೋಗ್ಯ ತಪಾಸಣೆ ಶಿಬಿರ ಸಹಿತ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಮುಖ್ಯ ಅತಿಥಿಯಾಗಿದ್ದ ಚೇಳಾರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ.ಜ್ಯೋತಿ ಚೇಳಾರು ಮಾತನಾಡಿ ಕೊರಗ ಸಮುದಾಯದ ಮಹಿಳೆಯರು ತಮ್ಮ ಮುಂದಿನ ಪೀಳಿಗೆಗೆ ಶಿಕ್ಷಣದ ಬುನಾದಿ ಹಾಕಬೇಕು. ಯುವಕರು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಸಮಾಜದ ವ್ಯವಸ್ಥೆಯನ್ನು ಉತ್ತಮಗೊಳಿಸಬೇಕು ಎಂದರು.
ರೆಡ್‌ಕ್ರಾಸ್‌ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಉಪಸಮಿತಿಯ ನಿರ್ದೇಶಕಿ ಡಾ.ಸುಮನಾ ಬಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮ ಪಂಚಾಯಿತಿ ಸದಸ್ಯೆ ವಸಂತಿ ಚೇಳಾರು ಉಪಸ್ಥಿತರಿದ್ದರು. ಭಾಸ್ಕರ್ ಸ್ವಾಗತಿಸಿದರು.