ಹರಪನಹಳ್ಳಿಯ ಹರಿಹರ ವೃತ್ತದ ಮಸೀದಿಯೊಂದರ ಪೀರಲದೇವರಿಗೆ ಭಕ್ತರು ಹರಕೆ ಸಲ್ಲಿಸಿದರು. 
ಜಿಲ್ಲೆ

ಕೆಂಪು ಸಕ್ಕರೆ, ಲೊಬಾನ ಸಲ್ಲಿಕೆ

ರುದ್ರಪ್ಪ ವಾಲಿ

ಹರಪನಹಳ್ಳಿ: ಹಿಂದು-ಮುಸ್ಲಿಂ ಭಾವೈಕ್ಯ ಸಾರುವ ಮೊಹರಂ ಅತ್ಯಂತ ಸಡಗರದಿಂದ ಶನಿವಾರ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು.

ಹರಪನಹಳ್ಳಿ ಪಟ್ಟಣ, ಹುಲಿಕಟ್ಟೆ, ಅರಸಿಕೇರಿ, ಬಾಗಳಿ, ಕುಂಚೂರು, ಹೊಂಬಳಗಟ್ಟಿ, ಉಚ್ಚಂಗಿದುರ್ಗ, ಸೇರಿದಂತೆ ಹಲವು ಗ್ರಾಮಗಳಲ್ಲಿ ಹಿಂದು-ಮುಸ್ಲಿಂ ಸಮುದಾಯದವರು ಒಟ್ಟಾಗಿ ಸೇರಿ ಹಸೇನ್ ಹಾಗೂ ಹುಸೇನ್ ಅವರ ನೆನಪಿಗೋಸ್ಕರ ಪೀರಲ ದೇವರನ್ನು (ಫಕ್ಕೀರಸ್ವಾಮಿ) ಪ್ರತಿಷ್ಠಾಪಿಸಿ ಉಪ್ಪು, ಸಕ್ಕರೆ, ಎಣ್ಣೆ, ಲೋಬಾನ ಹಾಗೂ ಊದುಬತ್ತಿಗಳನ್ನು ಸರ್ಮಪಿಸಿದರು. ಕಟ್ಟಿಗೆ, ಕೊಬ್ಬರಿ ಹಾಗೂ ಉಪ್ಪು ಹಾಕಿದ ಅಗ್ನಿ ಕುಂಡದಲ್ಲಿ ನಡೆದು ಭಕ್ತಿ ಸರ್ಮಪಿಸಿದರು.

ತಾಲೂಕಿನೆಲ್ಲೆಡೆ ಹರಕೆಹೊತ್ತ ಹುಲಿ, ಹಳ್ಳಳ್ಳಿ, ಇತರೇ ವೇಷಧಾರಿಗಳು ದೇವರಿಗೆ ಭಕ್ತಿಯ ಹರಕೆಯನ್ನು ತೀರಿಸಿದರು.

ವೃತ್ತದಲ್ಲಿ ಸಮಾಗಮ

ಪಟ್ಟಣದಲ್ಲಿನ 12 ಗರಡಿಗಳು, 12 ಮಸೀದಿಗಳಿಂದ ಅಲಾಯಿ ದೇವರುಗಳು ಶನಿವಾರ ಸಂಜೆ ಹರಿಹರ ವೃತ್ತದಲ್ಲಿ ಸಮಾಗಮಗೊಂಡವು. ಸಾರ್ವಜನಿಕರು ಕೆಂಪು ಸಕ್ಕರೆ, ಲಾಡಿ, ಲೊಬಾನ ಧೂಪವನ್ನು ಹಾಕಿ ಪೂಜೆ ಸಲ್ಲಿಸಿದ ಬಳಿಕ ವಾದ್ಯಮೇಳಗಳೊಂದಿಗೆ ಹಸೇನ್-ಹುಸೇನ್ ಎಂಬ ಘೋಷದೊಂದಿಗೆ ಪಟ್ಟಣದ ಹಿರೆಕೆರೆಗೆ ತಲುಪಿ ವಿಶೇಷ ಪೂಜೆ ಸಲ್ಲಿಸಿ ಸಮಾಪ್ತಿಗೊಳಿಸಿದರು.