ವಿರಾಜಪೇಟೆ:
ಕೇರಳದಿಂದ ಕರ್ನಾಟಕಕ್ಕೆ ಕೆಂಪುಕಲ್ಲು ಇಟ್ಟಿಗೆ ಸಾಗಾಣಿಕೆ ಕಾನೂನುಬದ್ಧ ಸಾಗಾಣಿಕೆಗಿಂತ ಅಕ್ರಮ ರೀತಿಯಲ್ಲೇ ದಶಕಗಳಿಂದ ನಡೆಯುತ್ತಿದೆ ಎಂಬ ಕೂಗು ಕೇಳಿಬರುತಿತ್ತು. ಸಾಧಾರಣವಾಗಿ ಕಟ್ಟಡ ನಿರ್ಮಾಣದಲ್ಲಿ ಬಳಕೆಯಾಗುವ ಈ ಕೆಂಪುಕಲ್ಲು ಇಟ್ಟಿಗೆಗೆ ಇಲ್ಲಿನ ಸ್ಥಳೀಯ ಭಾಷೆಯಲ್ಲಿ ಚತ್ತ್ ಕಲ್ಲು ಎಂದು ಕರೆಯುತ್ತಾರೆ. ಕೊಡಗಿನ್ನಲ್ಲಿ ಈ ಕಲ್ಲಿಗೆ ಬಹುಬೇಡಿಕೆ ಇದೆ.
ಈ ಇಟ್ಟಿಗೆ ಬಳಸಿ ಕಾಮಗಾರಿಗನ್ನು ನಡೆಸಲು ಸೀಮೆಂಟ್, ಮರಳು ಹೆಚ್ಚು ಬೇಕಾಗಿಲ್ಲ. ಹಾಗಾಗಿ ವಿರಾಜಪೇಟೆ ಸೇರಿದಂತೆ ಅಕ್ಕಪಕ್ಕದ ಊರುಗಳಲ್ಲಿ ಕೇರಳದ ಕೆಂಪುಕಲ್ಲಿಗೆ ಇನ್ನಿಲ್ಲದ ಬೇಡಿಕೆ. ಮಂಗಳೂರಿನಲ್ಲಿ ಇಂಥ ಕೆಂಪುಕಲ್ಲು ಇಟ್ಟಿಗೆ ಲಭ್ಯವಿದ್ದರೂ, ಕೊಡಗು ಕೇರಳಕ್ಕೆ ಸಮೀಪವಿರುವ ಕಾರಣಕ್ಕೆ ಅಥವಾ ಕೇರಳದ ಪ್ರಭಾವ ಹೆಚ್ಚು ಇರುವುದರಿಂದ ಇಲ್ಲಿನ ಜನರು ಹೆಚ್ಚಾಗಿ ಕೇರಳದ ಇಟ್ಟಿಗೆಗಳನ್ನೇ ಬಯಸುತ್ತಾರೆ.
ಇದನ್ನೇ ಬಂಡವಾಳ ಮಾಡಿಕೊಂಡ ವ್ಯಾಪಾರಸ್ಥರು ಕೇರಳದ ಉಡತ್ತೂರಿನ್ನಲ್ಲಿ ೨೫ ರೂ. ಒಳಗೆ ಸಿಗುವ ಈ ಕೆಂಪು ಇಟ್ಟಿಗೆಗಳನ್ನು ಕರ್ನಾಟಕಕ್ಕೆ ತಂದು ಇಲ್ಲಿ ೪೮ ರಿಮದ ೫೬ ರೂ. ತನಕ ಮಾರಾಟ ಮಾಡುತ್ತಲೇ ಬಂದಿದ್ದಾರೆ. ಒಮ್ಮೊಮ್ಮೆ ಕೃತಕ ಅಭಾವ ಸೃಷ್ಟಿ ಮಾಡಿ ಇನ್ನೂ ಹೆಚ್ಚು ಬೆಲೆಗೆ ಮಾರಾಟ ಮಾಡಿ ಗ್ರಾಹಕರಿಗೆ ಹೊರೆ ಮಾಡುವುದೂ ಇದೆ.
ಈ ರೀತಿ ಸಾಗಾಣಿಕೆ ಈ ಭಾಗದಲ್ಲಿ ಸರಿಸುಮಾರು ಎರಡು ದಶಕಗಳಿಂದ ನಡೆಯುತ್ತಲೇ ಬರುತ್ತಿದೆ. ಆದರೀಗ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಖಡಕ್ ಸೂಚನೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ, ಗಣಿ ಮತ್ತು ಭೂವಿಜ್ಞಾನ, ಆರ್.ಟಿ.ಒದವರು ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದಾರೆ. ಕೆಂಪು ಕಲ್ಲು ಮಾತ್ರವಲ್ಲದೆ ಕೇರಳದಿಂದ ಮಾಕುಟ್ಟ ಮಾರ್ಗವಾಗಿ ಬರುವ ಎಂ ಸ್ಯಾಂಡ್, ಪಿ.ಸ್ಯಾಂಡ್ ಸೇರಿ ಎಲ್ಲಾ ಅಕ್ರಮ ಸಾಗಾಟಗಳಿಗೂ ತಡೆ ಹಾಕಲಾಗಿದೆ.
ಕೊಡಗಿನನಲ್ಲಿ ಕಟ್ಟಡ ನಿರ್ಮಾಣಕ್ಕೆ ಕೆಂಪು ಕಲ್ಲು ಇಟ್ಟಿಗೆಗೆ ಇನ್ನಿಲ್ಲದ ಬೇಡಿಕೆ ಇದ್ದು, ಇದೀಗ ಏಕಾಏಕಿ ಇಟ್ಟಿಗೆ ಹಾಗೂ ಎಂ ಸ್ಯಾಂಡ್ ಬರುವುದು ಸಂಪೂರ್ಣವಾಗೇ ನಿಂತು ಹೋಗಿರುವುದರಿಂದ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಸಿಕೊಂಡರಿಗೆ ಸಮಸ್ಯೆ ಆಗಿದೆ. ಆದರೆ ಮತ್ತೊಂದು ಕಡೆ ವಿರಾಜಪೇಟೆ ವಿಧಾನಸಭಾ ಶಾಸಕ ಎ.ಎಸ್ ಪೊನ್ನಣ್ಣ ಅಕ್ರಮ ಸಾಗಾಟಕ್ಕೆ ಬ್ರೇಕ್ ಹಾಕಿದ್ದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೂ ಪಾತ್ರವಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತವಾದ ಅಭಿಪ್ರಾಯಗಳು ಇಲ್ಲಿದೆ.
ಕೆಂಪು ಕಲ್ಲು, ಕಪ್ಪು ಕಲ್ಲು ಎನ್ನುವುದು ಇಲ್ಲಿ ವಿಷಯವಲ್ಲ. ಅಕ್ರಮವಾಗಿ ಸಾಗಾಣಿಕೆ ನಿಲ್ಲಬೇಕೆನ್ನುವುದು ನನ್ನ ಉದ್ದೇಶ. ಕಾನೂನು ಪ್ರಕಾರ ಸಮರ್ಪಕವಾದ ದಾಖಲಾತಿಗಳನ್ನು ಇಟ್ಟುಕೊಂಡು ಸಾಗಾಣಿಕೆ ಮಾಡಿದರೆ ಖಂಡಿತವಾಗಿ ಜಿಲ್ಲೆಯೊಳಗೆ ಪ್ರವೇಶ ಮಾಡಬಹುದು. ಅಂತಿಮವಾಗಿ ಜಿಲ್ಲೆಯಲ್ಲಿ ಅಕ್ರಮವಾದ ಸಾಗಾಣಿಕೆ ನಿಲ್ಲಬೇಕು.
ಎ.ಎಸ್. ಪೊನ್ನಣ್ಣ, ಶಾಸಕ, ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಗಣಿ ಮತ್ತು ಭೂವಿಜ್ಞಾನ ಇಲಾಖೆಯವರು ಸಹಾಯ ಕೇಳಿದಾಗ ನಾವೂ ಸಹಕರಿಸಿದ್ದೇವೆ. ಗಡಿಯ ಒಳಗೆ ಬರುವಾಗ ಯಾವ ವಾಹನದ ಬಳಿ ಸಂಬಂಧಪಟ್ಟ ಸರಕಿನ ಬಗ್ಗೆ ಸರಿಯಾದ ದಾಖಲಾತಿಗಳು ಇರಲಿಲ್ಲ ಅವರನ್ನು ನಿಲ್ಲಿಸಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಮಾಹಿತಿ ನೀಡಿದ್ದೇವೆ. ಸಂಬಂಧಪಟ್ಟ ಇಲಾಖೆಗಳಿಗೂ ಮಾಹಿತಿ ಕೊಡಲಾಗಿದೆ.
ರಾಮರಾಜನ್, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.
ಗಡಿಯಲ್ಲಿ ನಾವೂ ತಪಾಸಣೆ ಮಾಡ್ತಾ ಇದ್ದೀವಿ. ನಮಗೆ ಇರುವುದು ಒಬ್ಬರೇ ಇನ್ಸ್‌ಪೆಕ್ಟರ್. ದಿನವಿಡೀ ಅವರು ಕೆಲಸ ಮಾಡಬೇಕು. ಆಫೀಸ್ ಕೆಲಸ, ಪ್ರೋಟೋಕಾಲ್ ಎಲ್ಲಾ ನಾವೂ ಮಾಡಬೇಕು. ಗಡಿಯಲ್ಲಿ ಗಡಿಯ ಒಳಗೆ ಬರುವಾಗ ವಿಶೇಷ ಪರ್ಮಿಟ್ ತೆಗೆದುಕೊಂಡು ಬರಬೇಕು. ತೆರಿಗೆ ಕಟ್ಟಿಲ್ಲದಿದ್ದರೆ ಅದನ್ನು ಸಂಗ್ರಹ ಮಾಡುತ್ತೇವೆ. ಅಥವಾ ಅವರ ಬಳಿ ನ್ಯಾಷನಲ್ ಪರ್ಮಿಟ್ ಇರಬೇಕಾಗುತ್ತದೆ.
ಮಧುರ ಎಸ್.ಎನ್., ಸಾರಿಗೆ ಅಧಿಕಾರಿ ಮಡಿಕೇರಿ
ಶಾಸಕರ ನಿರ್ದೇಶನ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆದಿದೆ. ಅಕ್ರಮ ಸಾಗಾಣಿಕೆಯ ತಪಾಸಣೆ ಮಾಡಲಾಗುತ್ತಿದೆ. ಭಾರಿ ಲೋಡ್ ತುಂಬಿದ ಲಾರಿಗಳ ಬಗ್ಗೆ ಕೇರಳದ ಕಚೇರಿಯಲ್ಲಿ ವಿಚಾರಿಸಿ ಸತ್ಯಸತ್ಯತೆ ತಿಳಿದುಕೊಂಡು ನಾವು ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಅಕ್ರಮ ದಂಧೆಕೋರರು ನಮ್ಮ ಗಾಡಿ ಗುರುತು ಇಟ್ಟುಕೊಂಡು ನಾವೂ ಹೋದರೆ ಅವರು ಬಚ್ಚಿಟುಕೊಂಡು ಬಿಡುತ್ತಾರೆ. ಖಾಸಗಿ ವಾಹನದಲ್ಲಿ ಹೋಗಲು ನಮಗೆ ಅನುಮತಿಯಿಲ್ಲ.
ಜಿ. ಶ್ರೀನಿವಾಸ್, ಹಿರಿಯ ಜಿಯೋಲಾಜಿಸ್ಟ್, ಕೊಡಗು
ಅನೇಕರು ಈಗ ಇದೇ ಕಲ್ಲಿನಿಂದ ಮನೆ ಕಟ್ಟುತ್ತಿದ್ದಾರೆ. ಇದರ ಸಾಗಾಟ ಸಂಪೂರ್ಣ ನಿಂತುಹೋದರೆ ಅವರ ಮನೆಕಟ್ಟುವ ಕೆಲಸಕ್ಕೆ ತೊಂದರೆಯಾಗುತ್ತದೆ. ಆದರೆ ಒಬ್ಬಳು ಪ್ರಜ್ಞಾವಂತ ನಾಗರೀಕಳಾಗಿ ಹೇಳುವುದಾದರೆ ಅಕ್ರಮವಾಗಿ ಕೆಂಪುಕಲ್ಲು ಬರುವುದು ತಪ್ಪು. ಸರ್ಕಾರಕ್ಕೆ ತೆರಿಗೆ ಕಟ್ಟಿ ಬರಬೇಕು. ಕರ್ನಾಟಕದಿಂದ ಕೇರಳಕ್ಕೆ ಹಾಗೇ ಸುಮ್ಮನೆ ಹೋಗಲು ಬಿಡುತ್ತಾರ? ನಾವು ಕಟ್ಟಬೇಕಾದುದನ್ನು ಕಟ್ಟಿಯೇ ಹೋಗಬೇಕು. ಹೊಳೆಯಿಂದ ಮರಳು ತೆಗೆಯಲು ಬಿಡುವುದಿಲ್ಲ. ಜನರಿಗೆ ಸಿಗಬೇಕಾದ ಪರ್ಯಾಯ ಮರಳಿನ ರೂಪವನ್ನು ನೆಟ್ಟಗೆ ಪೂರೈಕೆ ಮಾಡದಿದ್ದರೆ ಜನರು ಬದುಕುವುದು ಹೇಗೆ? ಜನರ ಬೇಡಿಕೆ ಪೂರೈಸಬೇಕು, ಅಕ್ರಮ ಕೆಲಸಗಳು ನಿಲ್ಲಬೇಕು
ಆಶಾ ಸುಬ್ಬಯ್ಯ, ಪುರಸಭೆ ಸದಸ್ಯೆ, ವಿರಾಜಪೇಟೆ
ಇಲ್ಲೊಂದು ದಂಧೆ ನಡೆಯುತ್ತಿರುವುದು ಎಲ್ಲರಿಗೂ ತಿಳಿದಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಬಹಳ ನಷ್ಟವಾಗುತ್ತದೆ. ಮನೆಕಟ್ಟುತ್ತಿರುವವರಿಗೆ ತುಂಬಾ ತೊಂದರೆಗಳು ಆಗುತ್ತಿವೆ. ಇದನ್ನು ಮನಗಂಡು ಸರ್ಕಾರ ಕೆಲವು ರೂಪುರೇಷೆ ಮಾಡಿಕೊಂಡು ಸಾಗಾಟ ಮಾಡಲು ಬಿಡಬೇಕು. ಅವರು ಇಂತಿಷ್ಟು ಜಿ.ಎಸ್.ಟಿ ನಿಗದಿ ಮಾಡಲೇಬೇಕು. ಇಲ್ಲೀ ತನಕ ಖಾಸಗೀ ವ್ಯಕ್ತಿಗಳು ಲಾಭ ಮಾಡಿಕೊಳ್ತಾ ಇದ್ದರು. ಶಾಸಕರು ಈ ರೀತಿ ತಡೆ ಮಾಡಿ ಒಳ್ಳೆಯ ಕೆಲಸ ಮಾಡಿದ್ದಾರೆ. ಯಾವತ್ತೋ ಆಗಬೇಕಿತ್ತು ಈಗ ಆಗಿದೆ. ಆದರೆ ಇದು ಕೇವಲ ತಾತ್ಕಾಲಿವಾದ ಕೆಲಸ ಆಗಬಾರದು. ಶಾಸಕರು ಶಾಶ್ವತ ಪರಿಹಾರ ಕ್ರಮವನ್ನು ಈ ಗಡಿಯಲ್ಲಿ ಮಾಡಬೇಕು.
ಮಂಜುನಾಥ್ ಪಿ.ಎ., ವಿರಾಜಪೇಟೆ ತಾಲೂಕು ಜೆಡಿಎಸ್ ಅಧ್ಯಕ್ಷ
ಕೆಂಪು ಕಲ್ಲು ಕಾನೂನುಬದ್ಧವಾಗಿ ಬರಲಿ. ಸರ್ಕಾರದ ಬೊಕ್ಕಸಕ್ಕೆ ದೊಡ್ಡಮಟ್ಟದ ನಷ್ಟವಾಗುತ್ತಿದೆ. ಈ ಸಾಗಾಣಿಕೆ ಕಾನೂನುಬದ್ಧವಾಗಿಲ್ಲದ ಕಾರಣ, ಕೆಂಪುಕಲ್ಲು ಮಾರಾಟ ಮಾಡುವ ವ್ಯಾಪಾರಿಗಳು ಕೇರಳದಲ್ಲಿ ಬರೇ ೨೫ರೂಪಾಯಿಗೆ ಸಿಗುವ ಕಲ್ಲನ್ನು ಇಲ್ಲಿ ೫೮ರೂಪಾಯಿವರೆಗೂ ಮಾರುತ್ತಾರೆ. ಇದರಿಂದ ಗ್ರಾಹಕರಿಗೆ ವಿಪರೀತ ಹೊರೆ ಬೀಳುತ್ತಿದೆ. ಇದು ತಪ್ಪಬೇಕು. ಶಾಸಕರು ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ ಇದು ಸ್ವಲ್ಪದಿನಕ್ಕೆ ಸೀಮಿತವಾಗಬಾರದು. ಕಾನೂನುಬದ್ಧ ನಿಯಮ ರೂಪಿಸಿ, ಜನರ ಬಳಕೆಗೆ ನ್ಯಾಯವಾದ ಬೆಲೆಗೆ ಕೆಂಪುಕಲ್ಲು ಸಿಗುವ ಹಾಗೇ ಮಾಡಲಿ.
ಮದನ್, ಆರ್.ಟಿ.ಐ ಕಾರ್ಯಕರ್ತ
ಈ ಮೊದಲು ವಿಪರೀತ ಬೆಲೆಗೆ ಕೆಂಪುಕಲ್ಲು ಮಾರಾಟ ಮಾಡುತ್ತಿದ್ದರು. ಅವರು ಹೇಳಿದ ಬೆಲೆ ಕೊಟ್ಟು ಕಲ್ಲು ತೆಗೆದುಕೊಳ್ಳಬೇಕಾಗಿತ್ತು. ಜನರಿಗೆ ತೊಂದರೆ, ಸರ್ಕಾರಕ್ಕೆ ಮೋಸ ಮಾಡಲಾಗುತಿತ್ತು. ಆದರೀಗ ಅದಕ್ಕೆಲ್ಲಾ ತಡೆಯಾಗಿದೆ. ಜನರಿಗೆ ಸರಿಯಾದ ಬೆಲೆಯಲ್ಲಿ ಕಲ್ಲು ಸಿಗುವಂತೆ ಮಾಡಿದರೆ ಅನುಕೂಲವಾಗುತ್ತದೆ.
ಉಪೇಂದ್ರ, ಉಪಾಧ್ಯಕ್ಷ, ಆರ್ಜಿ ಗ್ರಾಮಪಂಚಾಯಿತಿ
ಸಾರ್ವಜನಿಕರಿಗೆ, ಕಟ್ಟಡ ನಿರ್ಮಾಣ ಮಾಡುವವರಿಗೆ ಬಹಳ ಕಡಿಮೆ ಬೆಲೆಯಲ್ಲಿ ಕಟ್ಟಡ ಸಾಮಾಗ್ರಿಗಳು ಸಿಗಬೇಕು. ಇದರ ಮಧ್ಯದಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿದರೆ ಅಕ್ರಮ ಸಾಗಾಣಿಕೆ ನಿಲ್ಲುತ್ತದೆ. ಅತೀ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿರುವುದರಿಂದ ಈ ವ್ಯಾಪಾರ ಅಕ್ರಮ ಸಾಗಾಣಿಕೆಯಾಗಿ ಬದಲಾಗಿದೆ. ಈಗ ಇದಕ್ಕೆ ತಡೆ ಮಾಡಿಸಿರುವ ಶಾಸಕರ ಕ್ರಮ ಅಭಿನಂದನೀಯ.
ಶಬರೀಶ್ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ