ಉಡುಪಿ: ದೇಹದ ಇತರ ಅಂಗಗಳಿಗೆ ಹೋಲಿಸಿದರೆ ಕಿವಿಯ ಬಗ್ಗೆ ಹೆಚ್ಚು ಮಹತ್ವ ನೀಡಲಾಗುತ್ತಿಲ್ಲ. ಇದರಿಂದ ಶ್ರವಣ ಸಮಸ್ಯೆ ಜಾಗತಿಕ ಮಟ್ಟದಲ್ಲಿ ಹೆಚ್ಚಾಗುತ್ತಿದೆ. ಈ ದೃಷ್ಟಿಯಿಂದ ಈ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ರೆಡ್ಕ್ರಾಸ್ ಮಾಡುತ್ತಿದೆ ಎಂದು ರೆಡ್ಕ್ರಾಸ್ ರಾಜ್ಯ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಹೇಳಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ವಿಕಲಚೇತನರ ಪುನರ್ವಸತಿ ಕೇಂದ್ರ ನೇತೃತ್ವದಲ್ಲಿ ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆ ಪ್ರಾಯೋಜಕತ್ವದಲ್ಲಿ ಆಟೋರಿಕ್ಷಾ ಚಾಲಕರು ಮತ್ತು ಮಾಲಕರ ಸಂಘ, ಟೀಮ್ ಈಶ್ವರ್ ಮಲ್ಪೆ ಇವರ ಆಶ್ರಯದಲ್ಲಿ ನಡೆದ ಉಚಿತ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ವಿತರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತಾನಾಡಿದರು.
ಜಿಲ್ಲಾ ಲಯನ್ಸ್ ಗವರ್ನರ್ ಸಪ್ನಾ ಸುರೇಶ್ ಶಿಬಿರ ಉದ್ಘಾಟಿಸಿದರು. ರೆಡ್ಕ್ರಾಸ್ ಆಡಳಿತ ಮಂಡಳಿ ಸದಸ್ಯರಾದ ವಿ.ಜಿ. ಶೆಟ್ಟಿ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ನೋಡಲ್ ಅಧಿಕಾರಿ ಜಯಶ್ರೀ, ವಾಕ್ ಮತ್ತು ಶ್ರವಣ ತಜ್ಞೆ ನೆಲಿಶಾ, ಶ್ರವಣ ತಜ್ಞೆ ಅಂಕಿತಾ ಮುಖ್ಯ ಅತಿಥಿಗಳಾಗಿದ್ದರು. ಜಿಲ್ಲಾ ರೆಡ್ ಕ್ರಾಸ್ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಪ್ರಸ್ತಾವಿಕವಾಗಿ ಮಾತಾನಾಡಿ ಸ್ವಾಗತಿಸಿದರು. ಉಡುಪಿ ಜಿಲ್ಲಾಸ್ವತ್ರೆಯ ವಾಕ್ ಮತ್ತು ಶ್ರವಣ ತಜ್ಞೆ ಸಮೀಕ್ಷಾ ಉಪನ್ಯಾಸ ನೀಡಿದರು. ಈಶ್ವರ್ ಮಲ್ಪೆ ತಂಡದ ಸಂಚಾಲಕ ಲವ ಬಂಗೇರ ಕಾರ್ಯಕ್ರಮದ ಮಹತ್ವ ವಿವರಿಸಿದರು. ರೆಡ್ ಕ್ರಾಸ್ ಖಜಾಂಚಿ ರಮಾದೇವಿ ವಂದಿಸಿದರು. ಇದೇ ಸಂದರ್ಭದಲ್ಲಿ ರೆಡ್ಕ್ರಾಸ್ ವತಿಯಿಂದ 10 ಜನ ಫಲಾನುಭವಿಗಳಿಗೆ ಉಚಿತವಾಗಿ ಶ್ರವಣ ಸಾಧನ ವಿತರಿಸಲಾಯಿತು.