ಜಿಲ್ಲೆ

ಕಲಿಕೆ ಹಂತದಲ್ಲೇ ಮಾನವೀಯ ಮೌಲ್ಯ ಬೆಳೆಸಿಕೊಳ್ಳಿ: ಸಚಿವ ಮಧು ಬಂಗಾರಪ್ಪ ಕಿವಿಮಾತು

ಕೆ.ಎನ್.ರಾಘವೇಂದ್ರ

ಮಂಡ್ಯ: ಮಕ್ಕಳಿಗೆ ಕಲಿಕೆಯ ಹಂತದಲ್ಲೇ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡಾಗ ಮಾತ್ರ ಪರಿಪೂರ್ಣ ಮನುಷ್ಯರಾಗಿ ಬೆಳೆಯಲು ಸಾಧ್ಯ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಕಿವಿಮಾತು ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ರಾಜ್ಯ ಮತ್ತು ಜಿಲ್ಲಾ ಶಾಖೆ ಸಹಯೋಗದಲ್ಲಿ ಜೂನಿಯರ್ ರೆಡ್‌ಕ್ರಾಸ್ ಘಟಕದಡಿ ಆಯೋಜಿಸಿರುವ ಮೈಸೂರು ವಿಭಾಗದ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಮೂರು ದಿನದ ತರಬೇತಿ ಶಿಬಿರದಲ್ಲಿ ಶುಕ್ರವಾರ ಭಾರತೀಯ ರೆಡ್‌ಕ್ರಾಸ್‌ನ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮಕ್ಕಳು ಓದಿನ ಜತೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ರೆಡ್‌ಕ್ರಾಸ್ ಸಂಸ್ಥೆಯು ಮಕ್ಕಳಲ್ಲಿ ಮಾನವೀಯ ತತ್ವ ಮತ್ತು ಮೌಲ್ಯಗಳನ್ನು ಬೆಳೆಸುವುದು, ಜನರ ಆರೋಗ್ಯ ವೃದ್ಧಿಸುವ ಕಾರ್ಯ ನಿರ್ವಹಿಸುವುದು. ಪ್ರಕೃತಿ ವಿಕೋಪಗಳ ಸಮಯದಲ್ಲಿ ಮಾನವೀಯ ನೆರವು ನೀಡುವುದು ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಸಮಾಜದ ಸ್ವಾಸ್ಥ್ಯವನ್ನು ಹೆಚ್ಚಿಸುವ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ಸಮಾಜ ಸೇವೆಯ ಕಾರ್ಯಕ್ಕೆ ನಮ್ಮ ಸರ್ಕಾರದಿಂದ ಎಲ್ಲ ರೀತಿಯಲ್ಲೂ ಸಹಕರಿಸಲಾಗುವುದು ಎಂದರು.

ರೆಡ್‌ಕ್ರಾಸ್ ಸಂಸ್ಥೆಯು ಮಕ್ಕಳಲ್ಲಿ ಸಮಾಜ ಸೇವೆ ಮಾಡುವ ಹಾಗೂ ಆರೋಗ್ಯದಲ್ಲಿ ಜಾಗೃತಿ ವಹಿಸುವ ಮೌಲ್ಯಗಳನ್ನು ಕಲಿಸಿಕೊಡುತ್ತದೆ. ವಿದ್ಯಾರ್ಥಿಗಳು ಶಾಲೆಯಲ್ಲಿ ತಮ್ಮ ಸಹಪಾಠಿಗಳಿಗೆ ಆರೋಗ್ಯದಲ್ಲಿ ಏರುಪೇರಾದಾಗ ತಕ್ಷಣ ಪ್ರಥಮ ಚಿಕಿತ್ಸೆ ಹೇಗೆ ಮಾಡಬೇಕೆಂದು ಸಹ ಕಲಿಸುತ್ತದೆ. ನಮ್ಮ ಸರ್ಕಾರ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಗುಣಮಟ್ಟ ಶಿಕ್ಷಣ ನೀಡುತ್ತದೆ. ಇದಕ್ಕಾಗಿ ನಾನು ಸರ್ಕಾರಕ್ಕೆ ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡುತ್ತೇನೆ. ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದು ಜೀವನದಲ್ಲಿ ಸಾಧನೆಗೈದು ಮಾನವೀಯ ಮೌಲ್ಯ ರೂಢಿಸಿಕೊಂಡು ವಿಶ್ವಮಾನವರಾಗಬೇಕು ಎಂದು ಕರೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಮಕ್ಕಳಲ್ಲಿ ಸಾಮಾಜಿಕ ಕಳಕಳಿಯನ್ನು ಹೇಗೆ ಬೆಳೆಸಬೇಕು. ಚಿಂತನೆ, ದೇಶಭಕ್ತಿ ಹಾಗೂ ಸಾರ್ವಜನಿಕ ಹಿತಾಸಕ್ತಿಯನ್ನು ಮೈಗೂಡಿಸಿಕೊಳ್ಳುವುದು ಹೇಗೆ ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯು ತರಬೇತಿ ನೀಡುತ್ತದೆ. ಇದನ್ನು ಕಲಿತ ಮಕ್ಕಳು ಸಮಾಜಕ್ಕೆ ಮಾದರಿಯಾಗಬಲ್ಲರು ಎಂದರು.

ಆರೋಗ್ಯ ಸೇವೆ ಹಾಗೂ ವಿಪತ್ತನ್ನು ಎದುರಿಸಲು ರೆಡ್‌ಕ್ರಾಸ್ ಸಂಸ್ಥೆ ನೆರವಾಗುತ್ತದೆ. ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಸಂಸ್ಥೆಯು ಸಮಾಜಕ್ಕೆ ಮಾದರಿಯಾಗಿದನ್ನು ನಾವೆಲ್ಲ ನೋಡಿದ್ದೇವೆ. ಸಂಸ್ಥೆಗೆ ಬಂದವರು ವೈಯಕ್ತಿಕ ಹಿತಾಸಕ್ತಿ ಬಿಟ್ಟು ಸಾರ್ವಜನಿಕ ಹಿತಾಸಕ್ತಿಗಾಗಿ ದುಡಿಯುತ್ತಾರೆ. ಇದು ನಿಜಕ್ಕೂ ಪ್ರಶಂಸನೀಯ. ಸರ್ಕಾರದಲ್ಲಿ ಪ್ರಸ್ತುತ ಎಲ್ಲ ಇಲಾಖೆಗಳಲ್ಲಿ ಬದಲಾವಣೆ ಹೆಜ್ಜೆ ಇಡಲಾಗುತ್ತಿದೆ. ಯಾವುದೇ ಲೋಪವಿಲ್ಲದೆ ಸರ್ಕಾರದ ಗ್ಯಾರಂಟಿಗಳು, ಸಾಮಾಜಿಕ ಸೇವೆಗಳು, ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಗೌರವ ಕೋಶಾಧ್ಯಕ್ಷ ಆನಂದ ಜಿಗಜಿನ್ನಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕರಾದ ರವಿಕುಮಾರ್ ಗಣಿಗ, ರಮೇಶ ಬಂಡಿಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ವಿಧಾನ ಪರಿಷತ್ ಸದಸ್ಯರಾ ಮರಿತಿಬ್ಬೇಗೌಡ, ಮಧು ಜಿ. ಮಾದೇಗೌಡ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ್ ಪಾಟೀಲ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಇತರರಿದ್ದರು.