ಜಿಲ್ಲೆ

ಜಿಲ್ಲೆಯಲ್ಲಿ ಇನ್ನೆರಡು ದಿನ ರೆಡ್ ಅಲರ್ಟ್

ಕಾರವಾರ: ಜೂನ್ 15 ಹಾಗೂ 16 ರಂದು ಜಿಲ್ಲೆಯಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ರೆಡ್ ಅಲರ್ಟ್ ಘೋಷಿಸಿದೆ.

ಪ್ರತಿ ದಿನ ಸರಾಸರಿ 204 ಮಿಮೀ ಮಳೆಯಾಗಬಹುದು ಎಂದು ಎಚ್ಚರಿಸಲಾಗಿದೆ. ಜೂನ್ 17 ಹಾಗೂ 18 ರಂದು ಆರೇಂಜ್ ಅಲರ್ಟ್, 19 ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಸೋಮವಾರ ಜಿಲ್ಲೆಯೆಲ್ಲೆಡೆ ಉತ್ತಮ ಮಳೆಯಾಗಿದೆ. ಗಾಳಿ ಇಲ್ಲದೆ ಒಂದೇ ಸಮನೆ ಮಳೆ ಸುರಿದಿದ್ದು, ಅಲ್ಲಲ್ಲಿ ಅನಾಹುತ ಸಂಭವಿಸಿದೆ. ಸೋಮವಾರ ಬೆಳಗಿನ ವರದಿಯಂತೆ ಹಿಂದಿನ 24 ಗಂಟೆಗಳ ಅವಧಿಯಲ್ಲಿ ಅಂಕೋಲಾ 44.2ಮಿಮೀ, ಭಟ್ಕಳ-74, ಹಳಿಯಾಳ-5.6, ಹೊನ್ನಾವರ-40.6, ಕಾರವಾರ-33.8, ಕುಮಟಾ-52.6, ಮುಂಡಗೋಡ-12, ಸಿದ್ದಾಪುರ-36.8, ಶಿರಸಿ-27, ಜೊಯಿಡಾ-9.4, ಯಲ್ಲಾಪುರದಲ್ಲಿ 22.4 ಮಿಮೀ ಮಳೆಯಾಗಿದೆ.

ಗೋಕರ್ಣದಲ್ಲಿ ನಿರಂತರ ಮಳೆ

ಗೋಕರ್ಣ: ಭಾನುವಾರದಿಂದ ಈ ಭಾಗದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದೆ. ಕಳೆದ ಎರಡು ದಿನದವರೆಗೂ ಕಂಡು ಬಂದಿದ್ದ ಗಾಳಿಯ ತೀವ್ರತೆ ಸೋಮವಾರ ಸ್ವಲ್ಪ ಕಡಿಮೆಯಾಗಿದೆ. ಆದರೆ, ಬೆಳಗ್ಗೆಯಿಂದ ನಿರಂತರ ಮಳೆ ಸುರಿಯುತ್ತಿದೆ. ಇದರಿಂದ ಬೆಳಗ್ಗೆ ಸಮುದ್ರದ ಭರತದ ವೇಳೆ ಮಹಾಬಲೇಶ್ವರ ಮಂದಿರ ಗರ್ಭಗುಡಿಯಲ್ಲಿ ಕೆಲ ಸಮಯ ನೀರು ಒಳ ಸೇರುವಂತಾಯಿತು. ಪುರಾಣ ಪ್ರಸಿದ್ಧ ಕೋಟಿತೀರ್ಥ ಪುಷ್ಕರಣಿ ಮತ್ತು ಇಲ್ಲಿರುವ ವಿವಿಧ ತೀರ್ಥಗಳಲ್ಲಿ ಮಳೆಯಿಂದಾಗಿ ನೀರಿನ ಪ್ರಮಾಣದಲ್ಲಿ ಹೆಚ್ಚಳ ಉಂಟಾಗಿದೆ. ನಿಲ್ಲದ ಮಳೆಯಿಂದಾಗಿ ಸೋಮವಾರ ಲಾಕ್​ಡೌನ್ ತೆರವುಗೊಂಡಿದ್ದ ಸಮಯದಲ್ಲಿ ಕೂಡ ಅಂಗಡಿ ಮತ್ತು ರಸ್ತೆಗಳ ಮೇಲೆ ಯಾವುದೇ ದಟ್ಟಣೆ ಇರದೆ ಜನರು ಅತ್ಯಂತ ಕಡಿಮೆ ಸಂಖ್ಯೆಯಲ್ಲಿದ್ದರು. ಈ ತನಕ ಮಳೆಯಿಂದ ಯಾವುದೇ ಹಾನಿ ಉಂಟಾಗಿಲ್ಲ.

ತುಂಬಿ ಹರಿಯುತ್ತಿವೆ ಶರಾವತಿ, ಗುಂಡಬಾಳ

ಹೊನ್ನಾವರ: ತಾಲೂಕಿನಾದ್ಯಂತ ಸೋಮವಾರ ಬೆಳಗ್ಗೆಯಿಂದ ರಾತ್ರಿಯವರೆಗೆ ನಿರಂತರ ಮಳೆಯಾಗಿದ್ದು, ವಿವಿಧ ಭಾಗಗಳಲ್ಲಿ ಮನೆ ಮತ್ತು ತೋಟಗಳಿಗೆ ಹಾನಿಯಾಗಿದೆ. ಕಳೆದ ಮೂರು ದಿನಗಳಿಂದ ಮಳೆಯಾಗಿರುವುದರಿಂದ ಶರಾವತಿ ಮತ್ತು ಗುಂಡಬಾಳ ನದಿ ತುಂಬಿ ಹರಿಯುತ್ತಿದೆ.