ಬೆಂಗಳೂರು: ರಾಜ್ಯದಲ್ಲಿ ವರುರ್ಣಾಭಟ ಮುಂದುವರಿದಿದ್ದು, ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೆಲವೆಡೆ ಭೂಕುಸಿತ ಉಂಟಾಗಿದೆ. ಕೇರಳದ ವಯನಾಡಿಗೆ ಹೊಂದಿಕೊಂಡಿರುವ ಕೊಡಗಿನ ಕೆಲವೆಡೆ ಭಾರಿ ವರ್ಷಧಾರೆ ಸುರಿಯುತ್ತಿದ್ದು, ಆ.3ರವರೆಗೆ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಂಗಳವಾರ ಮಧ್ಯಾಹ್ನದಿಂದ ಗುರುವಾರ ಬೆಳಗ್ಗೆಯವರೆಗೆ ಕರಾವಳಿಯ ದಕ್ಷಿಣಕನ್ನಡ, ಉಡುಪಿ ಹಾಗೂ ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಕೊಡಗು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಅವಧಿಯಲ್ಲಿ ಉತ್ತರಕನ್ನಡ ಮತ್ತು ಬೆಳಗಾವಿ ಜಿಲ್ಲೆಗಳಿಗೆ ಯೆಲ್ಲೇ ಅಲರ್ಟ್ ಕೊಡಲಾಗಿದೆ.
ಆ.1ರಿಂದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಆ.1ರಿಂದ 3ರವರೆಗೆ ಹೆಚ್ಚಿನ ಪ್ರಮಾಣದ ಮಳೆಯಾಗುವ ನಿರೀಕ್ಷೆ ಇದೆ. ರಾಜಧಾನಿ ಸುತ್ತಲಿನ ಜಿಲ್ಲೆಗಳಲ್ಲಿ ಮಾತ್ರ ಸಾಧಾರಣ ಪ್ರಮಾಣದ ವರ್ಷಧಾರೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರದ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.
ಗಾಳಿ ವೇಗ ಹೆಚ್ಚಳ, ಮೀನುಗಾರರಿಗೆ ಎಚ್ಚರಿಕೆ
ರಾಜ್ಯದಲ್ಲಿ ವಾಡಿಕೆಯಂತೆ ಜುಲೈ ಹಾಗೂ ಆಗಸ್ಟ್ ತಿಂಗಳಿನಲ್ಲಿ ಗಾಳಿಯ ವೇಗ ಹೆಚ್ಚಿರುತ್ತದೆ. ಸದ್ಯ ಪ್ರತೀ ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿರುವ ಹಿನ್ನೆಲೆಯಲ್ಲಿ ಆ.3ರವರೆಗೆ ಮೀನುಗಾರರು ಸಮದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಭಾಗಮಂಡಲ, ಕಳಸದಲ್ಲಿ 250 ಮಿ.ಮೀ. ಮಳೆ:
ಕೊಡಗಿನ ಭಾಗಮಂಡಲ ಹಾಗೂ ಚಿಕ್ಕಮಗಳೂರಿನ ಕಳಸದಲ್ಲಿ ಮಂಗಳವಾರ ಬೆಳಗ್ಗೆ ಮುಕ್ತಾಯವಾದ 24 ಗಂಟೆಗಳ ಮಳೆ ಲೆಕ್ಕದಲ್ಲಿ 250 ಮಿ.ಮೀ. ಅತಿ ಭಾರೀ ಮಳೆಯಾಗಿದೆ. ಕೊಟ್ಟಿಗೆಹಾರ ಹಾಗೂ ಆಗುಂಬೆಯಲ್ಲಿ ತಲಾ 210 ಮಿ.ಮೀ., ಲೋಂಡಾದಲ್ಲಿ 90 ಮಿ.ಮೀ. ಪ್ರಮಾಣದಲ್ಲಿ ವರ್ಷಧಾರೆಯಾಗಿದೆ.