ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಪೌರಕಾರ್ಮಿಕರ ಅಂತಿಮ ಪಟ್ಟಿಯಲ್ಲಿ ಆಯ್ಕೆಯಾಗಿರುವ ಪೌರಕಾರ್ಮಿಕರಿಗೆ ಮುಂಬರುವ ಮಾರ್ಚ್ ಅಂತ್ಯದೊಳಗಾಗಿ ನೇಮಕಾತಿ ಆದೇಶವನ್ನು ನೀಡಲಾಗುವುದು ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ಪೌರಕಾರ್ಮಿಕರ ಪಿತಾಮಹ ಐ.ಪಿ.ಡಿ ಸಾಲಪ್ಪ ಜನ್ಮ ದಿನಾಚರಣೆ ಅಂಗವಾಗಿ ಪಾಲಿಕೆ ಕೇಂದ್ರ ಕಚೇರಿಯ ಆವರಣದಲ್ಲಿರುವ ಡಾ. ರಾಜ್ಕುಮಾರ್ ಗಾಜಿನ ಮನೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿದ ಬಳಿಕ ಮಾತನಾಡಿದರು.
ಖಾಯಂ ಮಾಡಿಕೊಳ್ಳುತ್ತಿರುವ ಪೌರಕಾರ್ಮಿಕರ ಪೈಕಿ ಪೊಲೀಸ್ ತಪಾಸಣೆ ಹಾಗೂ ಮೀಸಲಾತಿ ಪ್ರಮಾಣಪತ್ರಗಳ ಸಿಂಧುತ್ವ ಕಾರ್ಯ ಪ್ರಗತಿಯಯಲ್ಲಿದೆ. ಆ ಪ್ರಕ್ರಿಯೆ ಮಾರ್ಚ್ ತಿಂಗಳಿನೊಳಗೆ ಪೂರ್ಣಗೊಳಿಸಲಾಗುವುದು. ಹಾಗಾಗಿ ಆ ಅವಧಿಯೊಳಗೆ 10 ಸಾವಿರ ಪೌರಕಾರ್ಮಿಕರಿಗೆ ನೇಮಕಾತಿ ಆದೇಶ ವಿತರಣೆಯಾಗಲಿದೆ ಎಂದರು.
ಐ.ಪಿ.ಡಿ.ಸಾಲಪ್ಪ ವರದಿ ಅಧರಿಸಿ ಸೌಲಭ್ಯ:
ಸ್ವಾತಂತ್ರ್ಯದ ಹೋರಾಟಗಾರರಾಗಿದ್ದ ಐ.ಪಿ.ಡಿ ಸಾಲಪ್ಪ ಅವರು ಬಿನ್ನಿಪೇಟೆ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಪೌರಕಾರ್ಮಿಕರ ಜೀವನದ ಸ್ಥಿತಿಗತಿ ಅವರು 36 ಅಂಶಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು. ಈ ವರದಿಯನ್ನಾಧರಿಸಿ ಪೌರಕಾರ್ಮಿಕರಿಗೆ ವಿವಿಧ ಸೌಲಭ್ಯಗಳು ಸಿಗುತ್ತಿದ್ದು, ಸಾಲಪ್ಪ ಅವರ ಕೊಡುಗೆ ಅನುಕರಣೀಯ ಎಂದು ತುಷಾರ್ ಗಿರಿನಾಥ್ ಶ್ಲಾಸಿದರು.
ಈ ವೇಳೆ ವಿಶೇಷ ಆಯುಕ್ತರಾದ ಡಾ. ಕೆ.ಹರೀಶ್‌ಕುಮಾರ್, ಸುರಳ್ಕರ್ ವಿಕಾಸ್ ಕಿಶೋರ್, ಉಪ ಆಯುಕ್ತ ಮಂಜುನಾಥ ಸ್ವಾಮಿ, ಜಂಟಿ ಆಯುಕ್ತರಾದ ಪ್ರತಿಭಾ, ಲಕ್ಷ್ಮಿದೇವಿ ಸೇರಿ ಇನ್ನಿತರ ಅಧಿಕಾರಿಗಳು ಹಾಜರಿದ್ದರು.
ಯಾಂತ್ರಿಕ ಯಂತ್ರಗಳ ವಿತರಣೆಗೆ ಕ್ರಮ:
ಮನೆ-ಮನೆಯಿಂದ ಸಂಗ್ರಹಿಸುವ ಕಸದ ಪದ್ದತಿ ಇನ್ನಷ್ಟು ಉತ್ತಮ ರೀತಿಯಲ್ಲಿ ಜಾರಿಯಾಗಬೇಕಿದೆ. ನಾಗರಿಕರು ರಸ್ತೆ ಬದಿ ಕಸ ಬಿಸಾಡುತ್ತಿದ್ದು, ಅದನ್ನು ಪೌರಕಾರ್ಮಿಕರೇ ಸ್ವಚ್ಛಗೊಳಿಸಬೇಕಿದೆ. ಮನೆ-ಮನೆಯಿಂದ ಕಸ ಸಂಗ್ರಹಿಸುವ ಪದ್ದತಿ ಸಮರ್ಪಕವಾಗಿ ನಡೆದಲ್ಲಿ ನಗರದ ತ್ಯಾಜ್ಯ ಸಮಸ್ಯೆ ಬಹುತೇಕ ನಿವಾರಣೆಯಾಗಲಿದೆ. ಜತೆಗೆ ಸದ್ಯ ಪೊರಕೆಯಿಂದಲೇ ಬೀದಿಗಳನ್ನು ಸ್ವಚ್ಛಗೊಳಿಸುತ್ತಿರುವ ಪೌರಕಾರ್ಮಿಕರಿಗೆ ಶೀಘ್ರ ಯಾಂತ್ರಿಕೃತ ಯಂತ್ರಗಳನ್ನು ನೀಡಲಾಗುವುದು ಎಂದು ಮುಖ್ಯ ಆಯುಕ್ತರು ತಿಳಿಸಿದರು.