ಜಿಲ್ಲೆ

ಕಾನೂನು ಸ್ವಯಂ ಸೇವಕರ ನೇಮಕ: ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಶಿಧರ್ ಶೆಟ್ಟಿ ಮಾಹಿತಿ

ಮಂಡ್ಯ: ಕಾನೂನು ಸೇವಾ ಪ್ರಾಧಿಕಾರದಿಂದ ಅರೆಕಾಲಿಕ ಕಾನೂನು ಸ್ವಯಂ ಸೇವಕರನ್ನು ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಶಿಧರ್‌ಶೆಟ್ಟಿ ತಿಳಿಸಿದರು.

ವಿಡಿಯೋ ಕಾನ್ಫರೆನ್ಸ್ ಮೂಲಕ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೇವಾ ಮನೋಭಾವ ಹೊಂದಿರುವ ಹಾಗೂ ಕಾನೂನು ವಿಷಯದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಆಸಕ್ತಿ ಹೊಂದಿರುವ ಎಸ್‌ಎಸ್‌ಎಲ್ಸಿ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಕಂಪ್ಯೂಟರ್ ಜ್ಞಾನವುಳ್ಳವರಿಗೆ ಆದ್ಯತೆ ನೀಡಲಾಗುವುದು ಎಂದರು.

ಶಿಕ್ಷಕರು(ನಿವೃತ್ತ ಶಿಕ್ಷಕರು ಕೂಡ), ನಿವೃತ್ತ ಸರ್ಕಾರಿ ನೌಕರರು, ವೈದ್ಯರು ಮತ್ತು ಫಿಜಿಷಿಯನ್, ಹಿರಿಯ ನಾಗರಿಕರು, ಎಂಎಸ್‌ಡಬ್ಲುೃ, ಅಂಗನವಾಡಿ ಕಾರ್ಯಕರ್ತೆಯರು, ಕಾನೂನು ಪದವಿ ವಿದ್ಯಾರ್ಥಿಗಳು, ರಾಜಕೀಯೇತರ ಸದಸ್ಯರು, ಮಂಗಳಮುಖಿಯರು, ಸೇವಾನಿರತ ಎನ್‌ಜಿಒಗಳು, ವಿದ್ಯಾವಂತ ಮತ್ತು ಉತ್ತಮ ನಡತೆಯುಳ್ಳ ಕೈದಿಗಳು ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.

ಅಭ್ಯರ್ಥಿಗಳು ಯಾವ ತಾಲೂಕು ಕಾನೂನು ಸೇವಾ ಸಮಿತಿ ಅಥವಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಲು ಬಯಸುತ್ತಾರೋ, ಅಂತಹ ಜಿಲ್ಲಾ ಕೇಂದ್ರ/ತಾಲೂಕಿನ ಖಾಯಂ ನಿವಾಸಿಗಳಾಗಿರಬೇಕು. ಮೌಖಿಕ ಸಂದರ್ಶನದ ನಂತರ ಆಯ್ಕೆ ನಡೆಸಲಾಗುವುದು. ನೇಮಕಾತಿಯಲ್ಲಿ ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ. ಆಸಕ್ತರು ಜಿಲ್ಲಾ ಅಥವಾ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿ, ವೆಬ್‌ಸೈಟ್ ಚ್ಞ ಈಜಿಠ್ಟಿಜ್ಚಿಠಿ ಇಟ್ಠ್ಟಠಿ ಮೂಲಕ ಅರ್ಜಿ ಪಡೆದು ಅಗತ್ಯ ದಾಖಲೆಯೊಂದಿಗೆ ಸೆ.29ರ ಸಂಜೆ 5ಗಂಟೆಯೊಳಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಎ.ಡಿ.ಆರ್ ಕಟ್ಟಡ ನ್ಯಾಯಾಲಯದ ಸಂಕೀರ್ಣ ಮಂಡ್ಯ ಹಾಗೂ ಆಯಾ ತಾಲೂಕಿನ ಕಾನೂನು ಸೇವೆಗಳ ಸಮಿತಿಗೆ ಸಲ್ಲಿಸಬೇಕು ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆನಂದ್ ಮಾತನಾಡಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಕನಿಷ್ಟ 50 ಮತ್ತು ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಕನಿಷ್ಟ 25 ಸ್ವಯಂ ಸೇವಕರನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಆಯ್ಕೆಯಾದವರಿಗೆ ಅವರು ಕೆಲಸ ನಿರ್ವಹಿಸುವ ದಿನಕ್ಕೆ 750 ರೂನಂತೆ ಗೌರವ ಸಂಭಾವನೆ ನೀಡಲಾಗುವುದು ಎಂದು ಹೇಳಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ಎಸ್.ಎಚ್.ನಿರ್ಮಲಾ ಇದ್ದರು.