ಜಿಲ್ಲೆ

ಮಾಕ್ ಡ್ರಿಲ್ ಜತೆಗೆ ಸೈನಿಕರ ನೇಮಕಾತಿ ನಡೆಸಲಿ

ಅರವಿಂದ ಅಕ್ಲಾಪುರ

ಶಿವಮೊಗ್ಗ: ದೇಶದ ಜನರ ಸುರಕ್ಷತೆಗೆ ಏನು ಅವಶ್ಯಕವೋ ಅದನ್ನು ಕೇಂದ್ರ ಸರ್ಕಾರ ಮಾಡಲಿ. ಮಾಕ್ ಡ್ರಿಲ್ ಜತೆಗೆ ಸೈನಿಕರ ನೇಮಕಾತಿಯನ್ನೂ ನಡೆಸಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವಶ್ಯವಿದ್ದರೆ ಪಾಕ್‌ನೊಂದಿಗೆ ಯುದ್ಧ ಮಾಡಲಿ. ಗುಪ್ತಚರ ಇಲಾಖೆ ವೈಫಲ್ಯ ಜಾಹೀರಾಗಿದೆ. ಅದರ ವಿರುದ್ಧವೂ ಕ್ರಮ ಜರುಗಿಸಬೇಕು. ದೇಶ ಮತ್ತು ರಾಜ್ಯಗಳ ಸುರಕ್ಷತೆಗೆ ಕೇಂದ್ರ ಸರ್ಕಾರ ಗಮನ ನೀಡಿದಾಗ ಅದನ್ನು ನಮ್ಮ ಸರ್ಕಾರ ಬೆಂಬಲಿಸಲಿದೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಇನ್ನೂ ಪಾಕಿಸ್ತಾನಿಗಳಿದ್ದಾರೆ ಎಂಬ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿಕೆಗೆ ತಿರುಗೇಟು ನೀಡಿದ ಮಧು ಬಂಗಾರಪ್ಪ, ಪಾಕಿಸ್ತಾನಿಗಳಿದ್ದರೆ ಸಂಸದರೇ ಹೋಗಿ ಹುಡುಕಿಕೊಂಡು ಬರಲಿ. ಕೇಂದ್ರ ಸರ್ಕಾರದ ಗುಪ್ತಚರ ಇಲಾಖೆ ಅವರ ಬಳಿಯೇ ಇದೆ. ಸಾವನ್ನು ಯಾವ ರೀತಿ ರಾಜಕೀಯವಾಗಿ ಬಳಸಿಕೊಳ್ಳಬೇಕೋ ಅದನ್ನು ಯಶಸ್ವಿಯಾಗಿ ಮಾಡುತ್ತಾರೆ. ಸಾಮಾನ್ಯರ ಸಾವಿಗೆ ಕಾರಣವಾದ ವೈಫಲ್ಯಗಳನ್ನು ಹುಡುಕಬೇಕು. ಪಾಕಿಸ್ತಾನದವವರ ಮೇಲೆ ಯುದ್ಧ ಮಾಡಲು ಬೇಡ ಅಂದವರು ಯಾರು? ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಅವರೂ ಪಾಕಿಸ್ತಾನದ ವಿರುದ್ಧ ಯುದ್ಧ ಘೋಷಣೆ ಮಾಡಿದ್ದರು. ಈಗ ನರೇಂದ್ರ ಮೋದಿಯೂ ಯುದ್ಧ ಘೋಷಿಸಲಿ ಎಂದು ಹೇಳಿದರು.

ಜಾತಿ ಜನಗಣತಿ ವಿಚಾರದಲ್ಲಿ ಕೇಂದ್ರ ಸರ್ಕಾರದವರು ಕಾಪಿ ಮಾಡಿದ್ದಾರೆ ಎಂದು ಪುನರುಚ್ಚರಿಸಿದ ಮಧು, ಹೇಗೆ ಜಾತಿ ಜನಗಣತಿ ಮಾಡಬೇಕು ಎಂಬುದನ್ನು ಸಿಎಂ ಸಿದ್ದರಾಮಯ್ಯ ಅವರ ಬಳಿ ಕಲಿತುಕೊಳ್ಳಲಿ. ಬಿಜೆಪಿಯವರು ಗಣತಿ ಮಾಡುವುದು ಜಾತಿ, ಧರ್ಮದ ಆಧಾರದಲ್ಲಿ. ಅದರ ಬದಲು ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಆಧಾರದ ಮೇಲೆ ಗಣತಿ ಮಾಡಬೇಕು. ಯಾರೂ ಹೊಟ್ಟೆ ಹಸಿವಿನಲ್ಲಿ ಮಲಗುವಂತಾಗಬಾರದು ಎಂಬುದು ಕಾಂಗ್ರೆಸ್ ನೀತಿಯಾಗಿದೆ ಎಂದರು.